ಸಂಕ್ರಾಂತಿಯ ಮೆಲುಕು
ಇ ನ್ನೇನು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ , ಅಂಗಡಿ ಮುಂಗಟ್ಟುಗಳಲ್ಲಿ ಸಾಲು ಸಾಲಾಗಿ ಪೇರಿಸಿಟ್ಟ ಎಳ್ಳು-ಬೆಲ್ಲದ ಪೊಟ್ಟಣಗಳು , ಅಕ್ಕ ಪಕ್ಕದ ಮನೆಗಳ ತಾರಸಿಯಲ್ಲಿ ಒಣಗಿಸಿದ ಕೊಬ್ಬರಿ , ಶೇಂಗಾಬೀಜ , ಪುಟಾಣಿ , ಬೆಲ್ಲದ ತುಂಡುಗಳು ಸಂಕ್ರಾಂತಿ ಹಬ್ಬ ಬಾಗಿಲಲ್ಲಿದೆ ಎಂದು ನೆನಪಿಸುತ್ತಿವೆ . ಈ ಮೊದಲೊಮ್ಮೆ ಸಂಕ್ರಾಂತಿ ಹಬ್ಬದ ಸಂಭ್ರಮದ ಬಗ್ಗೆ ಬರೆದಿದ್ದೆ . ಚಂದದ ಉಡುಗೆಯುಟ್ಟು , ಹೂವಿನ ಜಡೆ , ತಲೆಗೆ ಪಾರಂಪರ್ಯವಾಗಿ ಬಂದ ಚಿನ್ನದ ನಾಗರವನ್ನು ಧರಿಸಿ ಮನೆಮನೆಗೆ ಎಳ್ಳುಬೀರಲು ಹೋಗುವ ಬಾಲ್ಯದ ಸಂಭ್ರಮವೇ ಬೇರೆಯಿತ್ತು . ಹುಟ್ಟಿ ಬೆಳೆದಿದ್ದು ಮಲೆನಾಡಿನ ಕೊಂಕಣಿ ಬ್ರಾಹ್ಮಣ ಕುಟುಂಬ ದಲ್ಲಿ. ಮನೆಯಲ್ಲಿ ಹಬ್ಬ ಹರಿದಿನಗಳನ್ನು ಶಾಸ್ತ್ರೋಕ್ತವಾಗಿ , ಮಡಿ - ಮೈಲಿಗೆ , ಭಯ – ಭಕ್ತಿಗಳಿಂದ ಆಚರಿಸುವ ಸಂಪ್ರದಾಯ . ಆದರೆ ಸಂಕ್ರಾಂತಿಯಂದು ನಾವು ಬೀರುತ್ತಿದ್ದಿದ್ದು ಎಳ್ಳು - ಬೆಲ್ಲವಲ್ಲ , ಬದಲಿಗೆ ಕುಸುರೆಳ್ಳು ಎಂದು ಕರೆಯಲ್ಪಡುವ ಮನೆಯಲ್ಲೇ ಪಾಕ ಹಚ್ಚಿ ತಯಾರಿಸಿದ ಸಂಕ್ರಾಂತಿ ಕಾಳುಗಳನ್ನು . ಕೊಂಕಣಿ ಬ್ಯಾಣದಲ್ಲಿ ಬಾಡಿಗ...