ಸಂಕ್ರಾಂತಿಯ ಮೆಲುಕು

 

ನ್ನೇನು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ , ಅಂಗಡಿ ಮುಂಗಟ್ಟುಗಳಲ್ಲಿ ಸಾಲು ಸಾಲಾಗಿ ಪೇರಿಸಿಟ್ಟ ಎಳ್ಳು-ಬೆಲ್ಲದ ಪೊಟ್ಟಣಗಳು, ಅಕ್ಕ ಪಕ್ಕದ ಮನೆಗಳ ತಾರಸಿಯಲ್ಲಿ ಒಣಗಿಸಿದ  ಕೊಬ್ಬರಿ, ಶೇಂಗಾಬೀಜಪುಟಾಣಿ, ಬೆಲ್ಲದ ತುಂಡುಗಳು  ಸಂಕ್ರಾಂತಿ ಹಬ್ಬ ಬಾಗಿಲಲ್ಲಿದೆ  ಎಂದು ನೆನಪಿಸುತ್ತಿವೆ

     ಮೊದಲೊಮ್ಮೆ ಸಂಕ್ರಾಂತಿ  ಹಬ್ಬದ ಸಂಭ್ರಮದ ಬಗ್ಗೆ ಬರೆದಿದ್ದೆಚಂದದ ಉಡುಗೆಯುಟ್ಟು, ಹೂವಿನ ಜಡೆ , ತಲೆಗೆ ಪಾರಂಪರ್ಯವಾಗಿ ಬಂದ  ಚಿನ್ನದ ನಾಗರವನ್ನು ಧರಿಸಿ ಮನೆಮನೆಗೆ ಎಳ್ಳುಬೀರಲು ಹೋಗುವ  ಬಾಲ್ಯದ ಸಂಭ್ರಮವೇ ಬೇರೆಯಿತ್ತು.

   ಹುಟ್ಟಿ ಬೆಳೆದಿದ್ದು ಮಲೆನಾಡಿನ ಕೊಂಕಣಿ ಬ್ರಾಹ್ಮಣ ಕುಟುಂಬದಲ್ಲಿ.  ಮನೆಯಲ್ಲಿ ಹಬ್ಬ ಹರಿದಿನಗಳನ್ನು ಶಾಸ್ತ್ರೋಕ್ತವಾಗಿ , ಮಡಿ- ಮೈಲಿಗೆ, ಭಯಭಕ್ತಿಗಳಿಂದ  ಆಚರಿಸುವ  ಸಂಪ್ರದಾಯ. ಆದರೆ  ಸಂಕ್ರಾಂತಿಯಂದು ನಾವು ಬೀರುತ್ತಿದ್ದಿದ್ದು ಎಳ್ಳು-ಬೆಲ್ಲವಲ್ಲ , ಬದಲಿಗೆ  ಕುಸುರೆಳ್ಳು ಎಂದು ಕರೆಯಲ್ಪಡುವ  ಮನೆಯಲ್ಲೇ  ಪಾಕ  ಹಚ್ಚಿ ತಯಾರಿಸಿದ ಸಂಕ್ರಾಂತಿ ಕಾಳುಗಳನ್ನುಕೊಂಕಣಿ  ಬ್ಯಾಣದಲ್ಲಿ  ಬಾಡಿಗೆಗೆ ಬಂದಿರು, ಬೇರೆ ಊರಿಂದ ವರ್ಗವಾಗಿ ಬಂದ  ಜನರ, ಕನ್ನಡ ಗೆಳೆಯ ಗೆಳತಿಯರ ಮನೆಗಳಲ್ಲಷ್ಟೇ ನಮಗೆ ಎಳ್ಳು ಬೆಲ್ಲವನ್ನು ನೋಡಿ ಗೊತ್ತಿದ್ದದ್ದು

    ನಮ್ಮ ಅಜ್ಜಿ ಮತ್ತು ಚಿಕ್ಕಮ್ಮ ಕುಸುರೆಳ್ಳನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಡಿಸೆಂಬರ್ ತಿಂಗಳ ಚುಮುಗುಡುವ ಚಳಿ ಶುರುವಾಯಿತೆಂದರೆ ಸಂಕ್ರಾಂತಿ  ಕಾಳನ್ನು ಮಾಡಲು ಪ್ರಾರಂಭಿಸುವ ಸಮಯ ಅಂತರ್ಥ, ಚಳಿಯಲ್ಲಿ ಪಾಕ ಹಚ್ಚಿದರೆ ಎಳ್ಳಿಗೆ   ಚೂಪಾದ ಮುಳ್ಳುಗಳು ಮೂಡುತ್ತವೆ ಎಂಬ ಕಾರಣಕ್ಕೆ

   ಅಜ್ಜಿ , ಕಿರಾಣಿ ಅಂಗಡಿಯಿಂದ ಕೊಂಡು ತಂದಿರುವ  ಶೇಂಗಾಬೀಜ ಹಾಗೂ ಎಳ್ಳನ್ನು ಬಿಸಿಲಿಗೆ ಒಣಹಾಕುತ್ತಿದ್ದರುಶೇಂಗಾ ಬೀಜವನ್ನು ಮೊರದಲ್ಲಿ ಕೇರಿ , ಸಿಪ್ಪೆಯನ್ನು ಬೇರ್ಪಡಿಸುತ್ತಿದ್ದರು. ಇವುಗಳ ಜೊತೆಯಲ್ಲಿ ಹಿಡಿಯಷ್ಟು ಕುಂಬಳಕಾಯಿ ಬೀಜ, ನಾಲ್ಕು  ಏಲಕ್ಕಿ ಕಾಳುಗಳು, ಎಂಟ್ಹತ್ತು ಲವಂಗ , ಒಂದಿಷ್ಟು ಗೇರುಬೀಜಗಳನ್ನು ಬೆರೆಸುತ್ತಿದ್ದರು

    ಪಾಕವನ್ನು ಸಿದ್ಧಪಡಿಸಲು  ದೊಡ್ಡ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಕುದಿಸಲಾಗುತ್ತಿತ್ತು.  ಇದನ್ನು ತೆಳುವಾ  ಭೈರಾಸಿನಲ್ಲಿ  ಸೋಸಿ , ಮೇಲಿರುವ  ಕಂದು ಬಣ್ಣದ  ಕೊಳೆಯನ್ನು ಬೇರ್ಪಡಿಸಿ , ಮತ್ತೆ ಕುದಿಸುತ್ತಿದ್ದರು, ಹೀಗೆರಡು ಮೂರು ಬಾರಿ ಮಾಡಿ, ಕೊನೆಯಲ್ಲಿ ಪಾಕಕ್ಕೆ ಒಂದು ಲೋಟದಷ್ಟು  ಹಾಲನ್ನು ಬೆರೆಸುತ್ತಿದ್ದರು. ಬಾರಿ ಕುದಿಸಿದ ಪಾಕವನ್ನು ಸೋಸುವಾಗ ಮೇಲೆ ಹತ್ತಿಉಂಡೆಯಂತಹ  ರೆಸಿಡ್ಯೂ ಉಳಿಯುತ್ತಿತ್ತು. ಅದನ್ನು ತಿನ್ನಲು  ನಾವು ಮಕ್ಕಳು ನಾ ಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದೆವು. ಅದರ ರುಚಿ ರಸಗುಲ್ಲ ತಿಂದಂತೆಯೇ ಇರುತ್ತಿತ್ತು.   ಹೀಗೆ  ಸೋಸಿದ ಪಾಕವನ್ನು ಕೊನೆಗೊಮ್ಮೆ ಬಾರಿ ಕುದಿಸಿ , ಒಂದು ಹನಿಯಷ್ಟು ಪಾಕವನ್ನು ಅಡುಗೆ ಮನೆ ಕಡಪದ  ಕಟ್ಟೆಯ  ಮೇಲೆ ಹೊಯ್ದಾಗ ಅದು ಹರಡಿಕೊಳ್ಳಬಾರದು, ಕಲ್ಲಿನಂತೆ ಗಟ್ಟಿಯೂ ಆಗಬಾರದು, ಕದಲಿಯೂ ಕದಲದಂತಿರಬೇಕು !!  ಆಗ  ಪರ್ಫೆಕ್ಟ್ ಪಾಕ ತಯಾರಾಗಿದೆ ಅನ್ನುವುದು ಅಜ್ಜಿಯ ಅಂಬೋಣ

   ಪಾಕ ಮತ್ತು ಕಾಳುಗಳು ಸಿದ್ದವಾದ ಮೇಲೆ ಒಲೆಯ  ವ್ಯವಸ್ಥೆ. ಇದ್ದಿಲ ಒಲೆಯೇ ಕುಸುರೆಳ್ಳು ಮಾಡಲು ಸೂಕ್ತಮನೆಯ ಸಮೀಪದ  ದೇವಸ್ಥಾನದಿಂದ  ದೊಡ್ಡದಾದ  ಹಿತ್ತಾಳೆ ಹರಿವಾಣವನ್ನು ಅಜ್ಜಿ ಎರವಲು ತರುತ್ತಿದ್ದರು. ಚಳಿ ಜಾಸ್ತಿ ಇರುವ ಸಮಯ ಅಂದರೆ ಬೆಳಿಗ್ಗೆ ಐದೂವರೆ ಆರುಗಂಟೆ ಅಥವಾ  ತಡರಾತ್ರಿ  ಹತ್ತು ಗಂಟೆಯ ನಂತರ  ಪಾಕ ಹಚ್ಚಲು ಸೂಕ್ತವಾದ   

ಸಮಯವಾಗಿರುತ್ತಿತ್ತು.  ಒಲೆಯಲ್ಲಿ ಇದ್ದಿಲು ತುಂಬಿ, ಕಿಡಿ ಹೊತ್ತಿಸಿ, ಗಾಳಿಯೂದಿ, ಅಜ್ಜಿ ಚಿಕ್ಕಮ್ಮ ಇಬ್ಬರೂ ಸರತಿಯಲ್ಲಿ  ಪಾಕ ಹಚ್ಚುತ್ತಿದ್ದರು, ಹರಿವಾಣಗಳಲ್ಲಿ ಒಣಗಿಸಿದ ಕಾಳುಗಳನ್ನು ಸುರುವಿ , ಒಂದು ಬಾರಿಗೆ ಒಂದೇ ಚಮಚದಷ್ಟು ಪಾಕವನ್ನು ಹಾಕಿ, ನಾಜೂಕಾಗಿ ಕೈ ಯಾಡಿಸುತ್ತಾ, ಶಾಖ ಹೆಚ್ಚಾದಾಗ, ಹರಿವಾಣವನ್ನು ಕೆಳಗಿಳಿಸಿ  , ಮತ್ತೆ ಕೈ ಆಡಿಸುತ್ತಾ, ಸಮಯದಲ್ಲಿ ಇನ್ನೊಬ್ಬರು ಒಲೆಯ ಮೇಲೆ ಹರಿವಾಣವನ್ನಿಟ್ಟು ಪಾಕ ಹಚ್ಚುವುದು, ಜೊತೆಗೊಬ್ಬರು ಮಾತು ಹರಟೆಗೆ ಇರುವುದಲ್ಲದೇ , ಸರತಿಯಲ್ಲಿ ಬಳಸುವುದರಿಂದ   ಇದ್ದಿಲ ಒಲೆಯ ಕೆಂಡಗಳೂ   

ವ್ಯರ್ಥವಾಗಬಾರದು  ಎನ್ನುವುದು ಅವರ ಉದ್ದೇಶ . ನಾವೂ ಕೂಡ ಶಾಲೆ - ಕಾಲೇಜಿನ ಪುಸ್ತಕವನ್ನು ಓದುತ್ತಾಮಲೆನಾಡಿನ ಡಿಸೆಂಬರ್ ತಿಂಗಳ ಚಳಿಯಲ್ಲಿ  ಇದ್ದಿಲ ಒಲೆಯ ಪಕ್ಕ ಕೂತು,  ಮೈ ಬೆಚ್ಚ ಮಾಡಿಕೊಳ್ಳುತ್ತಿದ್ದೆವು. ಕೆಂಡಗಳಿಗೆ ಬೂದಿ ಮುಚ್ಚಿಕೊಂಡರೆ  ಕೈಯಲ್ಲಿದ್ದ  ಪುಸ್ತಕದಿಂದಲೇ ಗಾಳಿ ಹಾಕಿ ಕೆಂಡ ಮಿರಮಿರ ಮಿಂಚುವಂತೆ ಮಾಡುವುದೆಂದರೆ ಅದೇನೋ ಮೋಜು

   ಹೀಗೆ ದಿನಕ್ಕೆ ಒಂದೆರಡು ಗಂಟೆ ಪಾಕ ಹಚ್ಚಿದ ಮೇಲೆ  ಎರಡುಮೂರು ದಿನಗಳಲ್ಲಿ  ತೆಳು ಪದರವೊಂದು  ಮೂಡಿ ಎಲ್ಲಾ ಕಾಳುಗಳೂ ಬಿಳಿ ಬಣ್ಣದ್ದಾಗುತ್ತಿದ್ದವು, ಐದಾರು  ದಿನ ಪಾಕ ಹಚ್ಚಿದಾಗ ಎಲ್ಲ ಕಾಳುಗಳಿಗೆಲ್ಲಾ ನಾಜೂಕಾದ ಮುಳ್ಳುಗಳು ಮೂಡಿಹಬ್ಬದ ದಿನ ಬೀರಲು  ಸಜ್ಜಾಗುತ್ತಿದ್ದವುಹೀಗೆಯೇ ಹದಿನೈದು ಇಪ್ಪತ್ತು ದಿನಗಳಲ್ಲಿ ಅಜ್ಜಿ ಮತ್ತು ಚಿಕ್ಕಮ್ಮ ಸೇರಿ ಐದಾರು  ಕೆಜಿಯಷ್ಟು ಕುಸುರೆಳ್ಳನ್ನು ತಯಾರಿಸುತ್ತಿದ್ದರುಬಣ್ಣದ ಕಾಳು ಬೇಕಾದರೆ  ಸ್ವಲ್ಪ ಎಡಿಬಲ್ ಫುಡ್ ಕಲರ್ ಅನ್ನು  ಪಾಕಕ್ಕೆ  ಬೆರೆಸುತ್ತಿದ್ದರು.   ಇಷ್ಟೇ ಅಲ್ಲದೇ   ತುಳಸಿ ಮತ್ತು ರೈಲು ಆಕಾರದ ಮರದ ಅಚ್ಚುಗಳಲ್ಲಿ ಸಕ್ಕರೆ ಪಾಕ ತುಂಬಿ ಅಚ್ಚುಗಳನ್ನು  ಕೂಡ ಮನೆಯಲ್ಲೇ ತಯಾರಿಸುತ್ತಿದ್ದರುತನ್ನ ಎಂಬತ್ತನೇ ವಯಸ್ಸಿಗೂ  ತಾಳ್ಮೆಯಿಂದ ಕುಳಿತು ಮೊಮ್ಮಕ್ಕಳಿಗಾಗೇ ಎಂದು ಕುಸುರೆಳ್ಳು ತಯಾರಿಸುತ್ತಿದ್ದ ಅಜ್ಜಿಯ ಆಸಕ್ತಿ, ಪ್ರೀತಿಗೆ ತಲೆದೂಗಲೇಬೇಕು.

   ಗೌರಿ ಗಣೇಶ ಹಬ್ಬಕ್ಕೆ , ದೀಪಾವಳಿಗೆ ಮನೆ ಮಕ್ಕಳಿಗೆಲ್ಲ ಸುತ್ತಲೂ ಕೂರಿಸಿ ಪಟಾಕಿ ಹಂಚುವ ನಮ್ಮ ಮನೆಯಲ್ಲಿ, ಸಂಕ್ರಾಂತಿಯ  ದಿನ ಒಬ್ಬೊಬ್ಬರಿಗೆ ಒಂದು ಪುಟ್ಟ ಸ್ಟೀಲ್ ಡಬ್ಬದಲ್ಲಿ ಸಂಕ್ರಾಂತಿಕಾಳುಗಳ ನ್ನು  ಹಂಚಲಾಗುತ್ತಿತ್ತು. ನಮ್ಮ ನಮ್ಮ ಡಬ್ಬಿಗಳನ್ನು  ನಾವೆಲ್ಲರೂ  ತುಂಬಾ ಜೋಪಾನವಾಗಿಟ್ಟುಕೊಳ್ಳುತ್ತಿದ್ದೆವುಪದೇ ಪದೇ ತಿಂದರೆ  ಖಾಲಿಯಾಗಬಹುದೆಂಬ ಆತಂಕದಿಂದ ದಿನಕ್ಕೆ ಒಂದೇ  ಒಂದು ಸಲ  ಒಂದು ಚಮಚದಷ್ಟು ತಿಂದು, ನಾಳೆ,ನಾಡಿದ್ದಿಗೆ ಬೇಕೆಂದು ತೆಗೆದಿಡುತ್ತಿದ್ದೆವು. ನಾನಂತೂ ಹಸುರುಬಣ್ಣದ ಕಬ್ಬಿಣದ ಸ್ಟಡಿ ಟೇಬಲ್ ಒಳಗೆ ನನ್ನ ಡಬ್ಬಿಯನ್ನಿಟ್ಟು ಬೀಗ ಹಾಕುತ್ತಿದ್ದೆ!!   " ನಿನ್ನ ಅಸ್ತಿ ಇಟ್ಟಿದೀಯಾ ಅಲ್ಲಿ?"  ಅಂತ ತಂಗಿ -ತಮ್ಮಂದಿರು ಕಿಚಾಯಿಸುತ್ತಿದ್ದರು.

(ನನ್ನ ಬಾಲ್ಯದ  ಗೆಳತಿಯ ಮನೆಯಲ್ಲಿ   ತಯಾರಿಸಿದ ಕುಸುರೆಳ್ಳಿನ ಚಿತ್ರವನ್ನು   ಲೇಖನದಲ್ಲಿ ಬಳಸಿಕೊಂಡಿದ್ದೇನೆ.)


    ವಯಸ್ಸಾಗುತ್ತ ಬಂದ  ಅಜ್ಜಿಗೆ ಈಗ ಸೊಂಟ ,ಬೆನ್ನು ಅಷ್ಟು ಹೊತ್ತಿನ ಕಾಲ ಕೂರಲು ಬಿಡುತ್ತಿರಲಿಲ್ಲ, ಸಿರಸಿ , ಸಿದ್ದಾಪುರ , ಕುಮಟಾ , ಹೊನ್ನಾವರಗಳ ಕೊಂಕಣಿ ಮನೆಗಳಲ್ಲಿ ಮಾರಾಟಕ್ಕೆ  ಸಿಗುತ್ತಿದ್ದ ಸಂಕ್ರಾಂತಿ ಕಾಳುಗಳನ್ನು ಕೊಂಡು ತಂದರಾಯ್ತು ಎಂದು ಮನೆಯವರೆಲ್ಲ ಹೇಳಿದರೂ ಅಜ್ಜಿಗೆ ತನ್ನ ಕೈಯಾರೆ ಮಾಡಿ ಮಕ್ಕಳಿಗೆ ತಿನ್ನಿಸಬೇಕೆಂಬ ಹಂಬಲ.ಗ್ಯಾಸ್ ಒಲೆಯ ಮೇಲೆದೊಡ್ಡ ಬಾಣಲೆಯಲ್ಲಿ ಶೇಂಗಾಬೀಜ ಹುರಿದು, ಅದಕ್ಕೆ ಪಾಕ ಸುರಿದು, ದೋಸೆ ಕೈಯಲ್ಲಿ ಅದನ್ನ ಆಡಿಸಿ , ಮತ್ತೆ ಪಾಕ ಹಾಕಿ ಒಂದೇ ದಿನದಲ್ಲಿ ಸಕ್ಕರೆ  ಪೆಪ್ಪರುಮೆಂಟಿನಂತಹ  ಕಾಳುಗಳನ್ನು ಮಾಡಿ ಮುಗಿಸುತ್ತಿದ್ದರು. ನಾಜೂಕಾಗಿರದೇ ,ಮುಳ್ಳುಗಳು  ಮೂಡದೇ ಹೋದರೂ  ಅಜ್ಜಿಯ ಪ್ರೀತಿಗೆ ಸಕ್ಕರೆ ಕಾಳುಗಳ  ರುಚಿ  ದುಪ್ಪಟ್ಟಾಗಿರುತ್ತಿತ್ತು

   ತೊಂಬತ್ತೊಂಬತ್ತು ವರ್ಷಗಳ ಕಾಲ ಬದುಕಿದ್ದ ಅಜ್ಜಿ ತನ್ನ ತೊಂಬತ್ತನೇ  ವಯಸ್ಸಿನವರೆಗೂ ಯಾರ ಮೇಲೂ ಅವಲಂಬಿತವಾಗದೇಶೌಚ, ಸ್ನಾನ, ಊಟ ತಿಂಡಿಗಳನ್ನೂ ಒಬ್ಬರೇ ಮಾಡುತ್ತಿದ್ದರು, ಕುಳಿತಲ್ಲಿಯೇ ಹತ್ತಿಯಿಂದ ಬೇರೆ ಬೇರೆ ಡಿಸೈನಿನ  ಗೆಜ್ಜೆವಸ್ತ್ರಗಳನ್ನೂ ತಯಾರಿಸುತ್ತಿದ್ದರು, ಬಿಸಿಲಿಗೆ ಒಣಗಿಸಿದ ಕಾಳು-ಕಡಿ , ಅಕ್ಕಿ, ಬೇಳೆಗಳನ್ನು  ಅಮ್ಮ ಚಿಕ್ಕಮ್ಮಂದಿರು ಮರೆತರೂ ಅಜ್ಜಿಗೆ ಜ್ಞಾಪಕವಿರುತ್ತಿತ್ತುಅವರಿಗೆಂದು ಕೊಡಿಸಿದ  ಮೊಬೈಲ್ ನಿಂದ ನಮ್ಮೆಲ್ಲರಿಗೂ ಫೋನ್ ಮಾಡಿ ಮಾತಾಡುತ್ತಿದ್ದರು, ಅಮ್ಮ ಚಿಕ್ಕಮ್ಮಂದಿರು , ಹಿತ್ತಿಲು ,ಅಂಗಳ ಎಂದು  ಎಲ್ಲೋ ಕೆಲಸದಲ್ಲಿ  ಮಗ್ನರಾಗಿರುವರೆಂದು ಏನಾದ್ರೂ ರೆಸಿಪಿ ಕೇಳಬೇಕಾದರೆ ನಾವು ಫೋನಾಯಿಸುತ್ತಿದ್ದಿದ್ದು ಅಜ್ಜಿಗೇ !!  ಸರಿಯಾಗಿ ಅಡುಗೆಯ ವಿಧಾನವನ್ನು , ಸಾಮಗ್ರಿಗಳ ಅಳತೆಯ ಸಹಿತ  ವಿವರಿಸುತ್ತಿದ್ದರು, ಮರಿಮಕ್ಕಳೊಟ್ಟಿಗೆ ಫೋನಲ್ಲಿ ಮಾತಾಡಿ ಹಿರಿಹಿರಿ ಹಿಗ್ಗುತ್ತಿದ್ದರು. . 

    ಎಂಟೊಂಬತ್ತು  ವರ್ಷಗಳಿಂದ ಕುಸುರೆಳ್ಳು ಮಾಡದೇ ಹೋಗಿದ್ದರೂ ,ಅದನ್ನು ಮಾಡಿ ಉಣಿಸಿದ ಹಿರಿಜೀವವೊಂದು ನಮ್ಮ ಜೊತೆಯಲ್ಲಿದೆ  ಎನ್ನುವ ಸಂತೋಷವಿತ್ತು ವರ್ಷ ಅಜ್ಜಿ ಇಲ್ಲದ ಮೊದಲ ಸಂಕ್ರಾಂತಿ , ಆಸ್ತಿಯಂತೆ ಬೀರುವಿನಲ್ಲಿ ಭದ್ರ ಮಾಡಿದ ಸಂಕ್ರಾಂತಿಕಾಳು ಗಳು ನಿಜವಾಗಿಯೂ ಬೆಲೆಕಟ್ಟಲಾಗದ ಆಸ್ತಿ ಎಂಬುದು  ಮನವರಿಕೆಯಾಗಿ, ಸಂತೋಷವನ್ನೂ, ದುಃಖವನ್ನೂ ಒಟ್ಟೊಟ್ಟಿಗೆ  ಅನುಭವಿಸುವ  ಪರಿಸ್ಥಿತಿ.  ತೊಂಬತ್ತೊಂಬತ್ತು ವರ್ಷ ಬದುಕಿದ ಅಜ್ಜಿ  ಮಕ್ಕಳು , ಮೊಮ್ಮಕ್ಕಳು, ಮರಿಮಕ್ಕಳನ್ನೂ ಆಡಿಸಿ , ಬೆಳೆಸಿ, ಸಾರ್ಥಕ ಜೀವನ ನಡೆಸಿದರು . ಭೌತಿಕವಾಗಿ  ನಮ್ಮೊಟ್ಟಿಗೆ  ಇಲ್ಲದೇ  ಹೋದರೂ  ನಮಗಾಗಿ ನೆನಪುಗಳ ಆಗರವನ್ನೇ ಬಿಟ್ಟುಹೋಗಿದ್ದಾರೆ  ಎನ್ನುವ ಸಮಾಧಾನ  ನಮ್ಮೆಲ್ಲರಲ್ಲಿ.ಪ್ರೀತಿ, ಮಮತೆಯ ಜೊತೆಯಲ್ಲಿ ಸಂಸ್ಕಾರ , ಆಚರಣೆಪರಿವಿಡಿನೀತಿಕಥೆಗಳನ್ನೂ ಹೇಳಿಕೊಡುವ ತಾತ -ಅಜ್ಜಿಯರೊಂದಿಗೆ  ಬೆಳೆಯುವ ಅವಕಾಶ ಸಿಕ್ಕ ಮಕ್ಕಳದೆಷ್ಟು ಭಾಗ್ಯಶಾಲಿಗಳು !! 

ತಮ್ಮೆಲ್ಲರಿಗೂ ಸಂಕ್ರಾಂತಿ  ಹಬ್ಬದ ಹಾರ್ದಿಕ ಶುಭಾಶಯಗಳು.




Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ