ಅಜ್ಜನ ನೆನಪು
ಆ ರಡಿ ಎತ್ತರ , ಕಪ್ಪು ಮೈಬಣ್ಣ, ಕೆಂಚು ಕಣ್ಣುಗಳಿಗೆ ಕಾವಲು ಕಾಯುವ ಬಿಳೀ ರೆಪ್ಪೆಗಳು , XXXL ಶರ್ಟಿಗೆ ಹೊಂದುವಂತಹ ಭುಜಗಳು, ವಯಸ್ಸಾಗಿರೋದ್ರಿಂದ ತುಸುವೇ ಬಾಗಿರೋ ಬೆನ್ನು , ಕಚ್ಚೆಪಂಚೆ,ಅರ್ಧ ತೋಳಿನ ಬನೀಯಾನು, ಆ ಬನೀಯಾನಿಂದ ಹೊರಗೆ ಇಣುಕುತ್ತಿರುವ ಜನಿವಾರಕ್ಕೆ ಬೆಸೆದುಕೊಂಡ ಬಿಳೀ ಹರಳಿನ ಉಂಗುರ, ಕಿವಿಗಳಲ್ಲಿ ಹರಳಿನ ಓಲೆಗಳು,ಈ ರೂಪಿಗೆ ಒಪ್ಪೋವಂಥಹ ಗಡಸು ಧ್ವನಿ . ನಮ್ಮಜ್ಜನ ಚಿತ್ರಣವನ್ನು ಕಟ್ಟಿಕೊಡಲು ಇಷ್ಟು ಸಾಕಲ್ಲವೇ? ಗಂಭೀರ ಸ್ವಭಾವದ ವ್ಯಕ್ತಿಯಾದರೂ ಮೊಮ್ಮಕ್ಕಳ ಪ್ರೀತಿಯಲ್ಲಿ ಕೆಲವೊಮ್ಮೆ ಅಲ್ಲಿ ಇಲ್ಲಿ ನಕ್ಕು ಹಗುರಾಗಿದ್ದುಂಟು. ಅದೇನೋ ಅಂದ ಹಾಗೆ ಮಕ್ಕಳು ಕೀಲಿಕೈ ಇಲ್ಲದೇ ಸಲೀಸಾಗಿ ಆಡಿಸುವಂತಹ ಗೊಂಬೆಗಳೆಂದರೆ ಅಜ್ಜ ಅಜ್ಜಿಯರಂತೆ. ಹಾಗೆಯೇ ಮೊಮ್ಮಕ್ಕಳಿಗೆ ಗೊಂಬೆಗಳಾಗಿ ಮೊಮ್ಮಕ್ಕಳನ್ನು ತಮ್ಮ ಗೊಂಬೆಗಳನ್ನಾಗಿಸಿಕೊಂಡು ಮನರಂಜಿಸಿದವರು, ಜೊತೆಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಕಲಿಸಿದವರು,ಮಾರ್ಗದರ್ಶಿಸಿದವರು ನಮ್ಮಜ್ಜ. ನಸುಕಿನಲ್ಲೆದ್ದು ಮನೆಯ ಹಿತ್ತಿಲಿನಲ್ಲಿರುವ ತೊಂಡೆ, ಸೀಮೇ ಬದನೆ, ಕುಂಬಳಕಾಯಿ ಬಳ್ಳಿಗಳನ್ಜು ಮುಟ್ಟಿ ತಡವಿ, ಕೊತ್ತಂಬರಿ, ಹರವೆ ಬೀಜಗಳನ್ನು ನೆಡಲು ಪಾತಿ ಮಾಡಿ ,ಅಂಗಳ...