ಮನೆಪಾಠ

 

ನೋಡನೋಡುತ್ತಿದ್ದಂತೆಯೇ   ಮಗಳು  ನನಗಿಂತ  ಎತ್ತರ ಬೆಳೆದುಬಿಟ್ಟಳು. ಪಾಟೀಚೀಲದಲ್ಲಿ ಪುಸ್ತಕ,ಚೂಪಾಗಿಸಿದ ಪೆನ್ಸಿಲ್,ನೀರಿನ ಬಾಟಲ್ ಅನ್ನು ಜೋಡಿಸಿಕೊಡಬೇಕಾಗಿದ್ದ ದಿನಗಳಿಂದ,ಪ್ರತಿಯೊಂದನ್ನೂ ತಾನೇ  ಸ್ವ ತಃ  ಮಾಡಿಕೊಳ್ಳುವಷ್ಟು ಜವಾಬ್ದಾರಿ  ಕಲಿತಿದ್ದಳು. ಕಷ್ಟವೆನಿಸುವ ಕೆಲವು ಗಣಿತ ಲೆಕ್ಕಗಳಿಗೆ, ಕನ್ನಡ ವ್ಯಾಕರಣಕ್ಕೆ ಮಾತ್ರ ನನ್ನ ಸಹಾಯ ಕೇಳುತ್ತಿದ್ದಳು.ನನಗೆ ಸಂಜೆಯ ವೇಳೆಗೆ ಹೊತ್ತು ಕಳೆಯುತ್ತಿರಲಿಲ್ಲ.

   ಅಕ್ಕಪಕ್ಕದಲ್ಲಿರುವವರು ತಮ್ಮ ಮಕ್ಕಳಿಗೆ ಮನೆಪಾಠ ಮಾಡುವಂತೆ ಕೇಳಿಕೊಂಡರು. ಮಗಳಿಗೆ ಕಲಿಸಿದಂತೆಯೇ ಕಲಿಸಿದರಾಯ್ತು ಎಂದು ಒಪ್ಪಿಕೊಂಡೆ. ಹೀಗೆ ಮೂರ್ನಾಲ್ಕು ವರ್ಷಗಳಿಂದ ಮನೆಪಾಠ ಮಾಡುತ್ತಿದ್ದೇನೆ. ಗಂಟೆ ಆರಾದರೆ ಸಾಕು, ಮನೆ ಮುಂದೆ ಪುಟ್ಟಪುಟ್ಟ ಚಪ್ಪಲಿಗಳು,ಚಿಲಿಪಿಲಿ ಮಾತುಗಳು,ಧಡಬಡ ಓಡಾಟ ಶುರು.



   ಪ್ರಾರಂಭದಲ್ಲಿ ಮನೆಪಾಠ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ.ಬರುವುದು ಬರೀ -೧೦ ಮಕ್ಕಳೇಆಗಿದ್ದರೂ ಭಲೇ ಕಿಲಾಡಿಗಳು, ಮಾತಿನಮಲ್ಲ ಮಲ್ಲಿಯರು..ಮಗಳಿಗೆ ಒಂದು ದಿನವೂ ಒಂದೇಟು ಕೊಟ್ಟಿದ್ದಿಲ್ಲ, ಅಂತಹುದರಲ್ಲಿ ಮಕ್ಕಳಿಗೆ ಶಿಕ್ಷಿಸುವುದು ಹೇಗೆ? ಕೇವಲ ಮಾತಲ್ಲೇ ಗದರಿಸಿ ಬಗ್ಗಿಸುವುದು ಕಷ್ತವಿತ್ತು.ಎಳನೇ ತರಗತಿಯ ಹುಡುಗಿಗೆ ಗಣಿತ ಹೇಳಿಕೊಡುತ್ತಾ ,ತಕ್ಷಣ ಒಂದನೇ ತರಗತಿಯ ಪಾಠ ಅರ್ಥಮಾಡಿಸುವ ತಾಳ್ಮೆ ರೂಢಿಸಿಕೊಳ್ಳಬೇಕಾಯ್ತು. ಕ್ರಮೇಣ ತಮಾಷೆಯಲ್ಲೇ ತಿದ್ದುವ,ಬುದ್ಧಿಹೇಳುವ ಅನುಭವ ಪಡೆದುಕೊಂಡೆ, ಒಂದೆರಡು ಬಾರಿ ಪೆಟ್ಟುಗಳನ್ನೂ ಕೊಟ್ಟಿದ್ದಾಯ್ತು. ಶುರುವಿನಲ್ಲಿಮ್ಯಾಮ್ಎಂದು ಕರೆಯುತ್ತಿದ್ದ ಮಕ್ಕಳುಆಂಟೀ’ ಎನ್ನಲು ಶುರು ಮಾಡಿದರು. ಗೌರವ ಮಿಶ್ರಿತ  ಭಯದಲ್ಲೂ ತರಲೆ ಮಾಡುತ್ತಿದ್ದರು.

   ಒಂದನೇ ತರಗತಿಯ ಪೋರನೊಬ್ಬ ನನ್ನ ಇಡೀ ದಿನದ ಆಯಾಸಕ್ಕೆ ಒಳ್ಳೆಯ ಸ್ಟ್ರೆಸ್ಸ್ ಬಸ್ಟರ್ ಆಗಿದ್ದಾನೆ.ಆತನ ಪುಟಾಣಿ ಚಪ್ಪಲಿಗಳಿಂದ ಹಿಡಿದು,ಬಗ್ಗಿ ಬರೆಯುವಾಗ ಹೊರಗೆ ಇಣುಕುತ್ತಿದ್ದ ಬೆಳ್ಳಿಉಡುದಾರದವರೆಗೂ ಎಲ್ಲಾ ಕ್ಯೂಟ್ ಕ್ಯೂಟ್.ಎಲ್ಲರೂ ಮುದ್ದಿಸುವ ಪುಟಾಣಿ ಇವನು.ಎಲ್ಕೇಜಿ, ಯೂಕೇಜಿಯಲ್ಲಿ ಉಂಡಾಡಿಗುಂಡನಂತೆ ಓಡಾಡಿಕೊಂಡಿದ್ದವನಿಗೆ ಒಂದನೇತರಗತಿಯ ಪಾಠ ಕಬ್ಬಿಣದ ಕಡಲೆ. ಇಂಗ್ಲೀಷ್ ಅಕ್ಷರಗಳನ್ನು ಕೂಡಿಸಿ ಓದುವುದು, ಬರೆಯುವಾಗ ಅವನ್ನು ಬಿಡಿಸಿ ಸ್ಪೆಲ್ಲಿಂಗ್ ಬರೆಸುವುದನ್ನು ರೂಢಿ  ಮಾಡಿಸಲು ಕೆಲ ತಿಂಗಳುಗಳೇ ಹಿಡಿದವು. ಜತೆಗೆ ಪಾಠಕ್ಕೆ ಬರುವ ಮಕ್ಕಳಿಗೆ ಆತ ಬಹುವಚನದಲ್ಲೇ ಸಂಬೋಧಿಸುವುದು  ನನಗೆ ಬಹಳ ಇಷ್ಟ. ಟ್ಯೂಶನ್ ಒಂದು ಕೆಲಸವೆಂದು ಮಾಡುತ್ತಿದ್ದ ನನಗೆ ಅದೊಂದು ಕರ್ತವ್ಯ ಎನಿಸಿದ್ದು , ಕ್ರಮೇಣ ಅದೊಂದು ಕಲೆ, ಹವ್ಯಾಸ,  ನಮ್ಮ ಬೆಳವಣಿಗೆಗೂ ಸಹಾಯ ಎಂದೆನಿಸಿದ್ದು ಸುಳ್ಳಲ್ಲ.

   ಮೂರಕ್ಷರದ ಪದಗಳನ್ನಷ್ಟೇ ಬರೆಯಬಲ್ಲ ಪೋರನಿಗೆ ವಾರದಲ್ಲಿ ಯೂನಿಟ್ ಟೆಸ್ಟ್ ಇತ್ತು. ತಂದೆ , ತಾಯಿ, ಅಕ್ಕ, ಗೆಳೆಯ, ಶಿಕ್ಷಕಿಯರ ಹೆಸರುಗಳನ್ನು ಬಿಟ್ಟ ಸ್ಥಳಗಳಲ್ಲಿ ತುಂಬಬೇಕಿತ್ತು. ನನ್ನ ಪುಣ್ಯಕ್ಕೆ ಆತನ ತಾಯಿ ಮತ್ತು ಶಿಕ್ಷಕಿಯ ಹೆಸರು ಒಂದೇ ಆಗಿತ್ತು. ಇನ್ನು ಗೆಳೆಯನ  ಹೆಸರೇನೆಂದು ಕೇಳಿದೆ. ಕಣ್ಣರಳಿಸಿಅದ್ವೈತಅಂದ. “ ಓಂ,ರಾಮ್,ರವಿ ಅನ್ನೋ ಹೆಸರು ಬರಿ..ಅವುಗಳನ್ನು ಬರಿಯೋದು ಸುಲಭಎಂದು ಹೇಳಬೇಕೆನಿಸಿದರೂ, ಅವನ ಮುಗ್ಧತೆಯನ್ನು ನೋಡಿ, ಸ್ವಲ್ಪಸುಧಾರಿಸಿಕೊಂಡುಇನ್ಯಾರೂ ಫ್ರೆಂಡ್ಸ್ ಇಲ್ವೇನೋ?” ಅಂದೆ.  ಹುಬ್ಬು ಹಾರಿಸುತ್ತಾ, ’ಶ್ರೀಶಅಂದ.  ಇದು ಪರವಾಗಿಲ್ಲ ಎನಿಸಿ ಅದನ್ನೇ ಬರೆಸಿ ಬರೆಸಿ ಅಭ್ಯಾಸ ಮಾಡಿಸಿದೆ. ಮರುದಿನವೂ ಎಲ್ಲವನ್ನೂ ಬರೆದ. ಪರೀಕ್ಷೆಯ ಮುಂಚಿನ ದಿನ ಬಂದು ಕಾರ್ಪೆಟ್ ಮೇಲೆ ಗುಮ್ಮನೆ ಕುಳಿತ“ಕೊಶ್ಚನ್ ಹಾಕಿ ಕೊಡ್ತಿನಿ  ಬರೀಬೇಕು ,ಆಯ್ತಾ?ಅಂದೆ. ಕೆನ್ನೆಯುಬ್ಬಿಸಿ  ಗಾಳಿಯಲ್ಲಿ ಕೈ ಮಾಡಿ ,”ಆಂಟೀ, ನನಗೂ ಶ್ರೀಶನಿಗೂ ಟೂ, ಹೆಸರು ಚೇಂಜ್ ಮಾಡಿಅಂದ!!!!

   ಅಷ್ಟೆ ಅಲ್ಲ.’wife’ಎಂಬ ಸ್ಪೆಲ್ಲಿಂಗ್ ಅನ್ನು’wolf ‘ ಎಂದು ಬರೆದು ಇಡೀ ಪುರುಷ ಸಮಾಜದ  ಅಸಹನೆಯನ್ನು ಹೊರಹಾಕಬಲ್ಲ ಧೀರನಿವನು.  ಜಾಸ್ತಿ ಮಾತನಾಡಿದಾಗನಿನ್ನ ಬೋಂಡ ಮಾಡಿ ಕರಿದು ತಿಂತೀನಿ” ಅಂದ್ರೆ, “ನಮ್ಮಪ್ಪನ  ಕೇಟರಿಂಗ್  ಗೋಡೌನ್ ನಲ್ಲಿ ಮಾತ್ರ ಅಷ್ಟು ದೊಡ್ಡ ಬಾಣಲೆಇರೋದು” ಅಂತ  ಬೀಗುತ್ತಾನೆ. ಸಾಕು ಪ್ರಾಣಿಗೆ  ಒಂದು ಉದಾಹರಣೆ ಕೊಡೊ ಅಂದ್ರೆ  ಹುಲಿ, ನಾನದನ್ನ ಸಾಕ್ಕೋತೀನಿ” ಎಂದುತ್ತರಿಸಿ ನನ್ನ ಬಾಯಿ ಮುಚ್ಚಿಸುತ್ತಾನೆ.

   ಅದೇ ವಯಸ್ಸಿನ ಇನ್ನೊಂದು ತುಂಟಿಗೆ, ಎರಡು ಮತ್ತು ಮೂರರ ಮಗ್ಗಿ ಬರೆಯಲು ಕೊಟ್ಟೆ, ಕಾಪಿ ಮಾಡದಿರಲೆಂದು ಮಗ್ಗಿ ಪುಸ್ತಕ ತಿರುವಿಟ್ಟೆ. ಬರೆದಾದ ಮೇಲೆ  ಆಂಟೀ,ನೀವು ನೋಡಿ  ಕರೆಕ್ಷನ್  ಮಾಡಿ ,ಪರವಾಗಿಲ್ಲ ಎಂದು ಪುಸ್ತಕ ನನ್ನತ್ತ ಚಾಚುತ್ತಾಳೆ. ಇಷ್ತು ಸಾಕಲ್ಲವೇ , ನಾನು ಬುದ್ಧಿವಂತೆ ಎಂಬ ನನ್ನ ಈಗೋವನ್ನು ನೆಲಕ್ಕೆ ಬಡಿಯಲು!!

   ಈಗ ಪರೀಕ್ಷೆಗಳು ನಡೆಯುತ್ತಿವೆ, ಎಲ್ಲರಿಗೂಮುಂದೆ  ಏನಾಗ್ತಿರಿ” ಅಂತ ಕೇಳಿದರೆ,ಇವನುತ್ತರ " ಎಲ್ರೂ ಡಾಕ್ಟ್ರಾಗ್ತಾರೆ, ನಾನು ಫೈರ್ ಮ್ಯಾನ್ ಆಗ್ತಿನಿ ಎನ್ನುತ್ತಾನೆ ಅಲ್ವೋ, ಡಾಕ್ಟ್ರಾದ್ರೆ  ನನ್ನ ಚೆಕ್ ಅಪ್ ಮಾಡು ಅಂತಿದ್ದೆ, ಇಂಜಿನೀಯರ್ ಆಗಿದ್ರೆ ಮನೆ ಕಟ್ಟಿ ಕೊಡೋ ಅನ್ಬೋದಿತ್ತು, ಈಗೇನೋ, ಎಲ್ಲಿ ಬೆಂಕಿ ಆರಿಸ್ತಿಯಾ?” ಅಂದ್ರೆ  ನನ್ನ ಫೈರ್ ಇಂಜಿನ್ ಅಲ್ಲಿ ಕೂರಿಸ್ಕೊಂಡು ನಿಮ್ಗೆ ಬೆಂಗಳೂರು ಸುತ್ತಿಸ್ತೀನಿ, ಅಷ್ಟರಲ್ಲಿ ನೀವೂ ದೊಡ್ಡವರಾಗಿ ಇನ್ನೂ ದೊಡ್ದ ಮ್ಯಾಮ್ ಆಗಿಅನ್ನುತ್ತಾ ಹಿರಿ ಹಿರಿ ಹಿಗ್ಗುತ್ತಾನೆ. ತಲೆ ಕೆರೆದುಕೊಳ್ಳುತ್ತ ಲೆಕ್ಕ ಬಿಡಿಸುತ್ತಿದ್ದ ಆರನೇ ತರಗತಿ ಹುಡುಗನಿಗೆನೀನೇನಾಗ್ತಿಯಅಂದೆ ಅವ್ನು ಬರಿತಿದ್ದವನು , ಒಂದು ಕೈ ಮೇಲೆ ಚಾಚಿ ಸನ್ನೆ ಮಾಡಿದ,  ಪೈಲಟ್ ಆಗ್ತೀನಿಅನ್ನೋದು ಅವನ ಉತ್ತರ. ಅಲ್ಲೇ ಇದ್ದ ಇವನು ”ಅಯ್ಯಯ್ಯೋ, ಅಣ್ಣಾ , ನೀವು ದೊಡ್ಡವರಾದ ಮೇಲೆ ಏರೋಪ್ಲೇನ್ ಆಗ್ತೀರಾ?ಎಂದು ಮುಸಿಮುಸಿ ನಗ್ತಾನೆ.ಯಾರಾದರೂ ಕರೆದರೆಂದು ಒಂದೆರಡು ನಿಮಿಷ ಎದ್ದು ಹೋದರೆ ,ನನ್ನ ಮಗಳ ಕಾಲೇರಿ ಕುಳಿತಿರುತಾನೆ, ವಾಪಸ್ ಬಂದ  ನನ್ನನ್ನು ಕಂಡು ತನ್ನ ಜಾಗಕ್ಕೆ ಬರಲು ದಡಬಡಾಯಿಸಿ ಮುಗ್ಗರಿಸುತ್ತಾನೆ..” ಮಾತುಕೇಳದ ಮಕ್ಕಳಿಗೆ ಚಾರ್ಜರ್ ಪಿನ್ ಬದಿಯಿಂದ ಪೆಟ್ಟು ಕೊಡಿ ಆಂಟೀ. ಅಂತಾನೆ ”ಚಾರ್ಜರ್ ಹಾಳಾಗತ್ತಲ್ಲೋ?” ಅಂದ್ರೆ  ಹಾಳಾಗಿರೋ ಚಾರ್ಜರ್ ಇಟ್ಕೋಳಿ” ಅನ್ನೊ ಸುಲಭೋಪಾಯವನ್ನೂ ಕೊಡುತ್ತಾನೆ.

   ಇನ್ನೇನು ಪರೀಕ್ಷೆಗಳು ಮುಗಿದಿವೆ.ಮನೆಯಲ್ಲಿ ಗಿಜಿಗಿಜಿ ಇಲ್ಲ, ನೆಲದ  ಮೇಲೆ  ಪೆನ್ಸಿಲ್ ಹೆರೆದ ಕಸವಿಲ್ಲ, ಮೆಟ್ಟಿಲ ಮೆಲೆ ಸದ್ದಿಲ್ಲ. ಎರಡು ತಿಂಗಳ ನಿಶ್ಶಬ್ದದ ನಂತರ ಮತ್ತದೇ ಚಪ್ಪಲಿ ರಾಶಿ, ಹಾಂ..ಒಂದಿಂಚು ದೊಡ್ಡ ಚಪ್ಪಲಿಗಳು

   ಮ್ಯಾಮನ್ನೂ ಊರಿಗೆ ಕರೆದೊಯ್ಯುವ ಆಮಿಷ ಒಡ್ದಿವೆ ಪುಟಾಣಿಗಳು. ಪರೀಕ್ಷೆ ಮುಗಿದ ದಿನ ಪಾರ್ಟಿ ಮಾಡುವ ಎಂದು ಭರವಸೆ ಕೊಟ್ಟಿದ್ದೇನೆ. “ನಾವೂ ಬಂದು ಹೆಲ್ಪ್ ಮಾಡ್ತೀವಿಎಂದಿವೆ ಪುಟಾಣಿಗಳು..

(2018  ಫೆಬ್ರವರಿಯಲ್ಲಿ ಬರೆದದ್ದು)

Popular posts from this blog

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ