ಅಜ್ಜನ ನೆನಪು
ಆರಡಿ ಎತ್ತರ , ಕಪ್ಪು ಮೈಬಣ್ಣ, ಕೆಂಚು ಕಣ್ಣುಗಳಿಗೆ ಕಾವಲು ಕಾಯುವ ಬಿಳೀ ರೆಪ್ಪೆಗಳು , XXXL ಶರ್ಟಿಗೆ ಹೊಂದುವಂತಹ ಭುಜಗಳು, ವಯಸ್ಸಾಗಿರೋದ್ರಿಂದ ತುಸುವೇ ಬಾಗಿರೋ ಬೆನ್ನು , ಕಚ್ಚೆಪಂಚೆ,ಅರ್ಧ ತೋಳಿನ ಬನೀಯಾನು, ಆ ಬನೀಯಾನಿಂದ ಹೊರಗೆ ಇಣುಕುತ್ತಿರುವ ಜನಿವಾರಕ್ಕೆ ಬೆಸೆದುಕೊಂಡ ಬಿಳೀ ಹರಳಿನ ಉಂಗುರ, ಕಿವಿಗಳಲ್ಲಿ ಹರಳಿನ ಓಲೆಗಳು,ಈ ರೂಪಿಗೆ ಒಪ್ಪೋವಂಥಹ ಗಡಸು ಧ್ವನಿ . ನಮ್ಮಜ್ಜನ ಚಿತ್ರಣವನ್ನು ಕಟ್ಟಿಕೊಡಲು ಇಷ್ಟು ಸಾಕಲ್ಲವೇ? ಗಂಭೀರ ಸ್ವಭಾವದ ವ್ಯಕ್ತಿಯಾದರೂ ಮೊಮ್ಮಕ್ಕಳ ಪ್ರೀತಿಯಲ್ಲಿ ಕೆಲವೊಮ್ಮೆ ಅಲ್ಲಿ ಇಲ್ಲಿ ನಕ್ಕು ಹಗುರಾಗಿದ್ದುಂಟು. ಅದೇನೋ ಅಂದ ಹಾಗೆ ಮಕ್ಕಳು ಕೀಲಿಕೈ ಇಲ್ಲದೇ ಸಲೀಸಾಗಿ ಆಡಿಸುವಂತಹ ಗೊಂಬೆಗಳೆಂದರೆ ಅಜ್ಜ ಅಜ್ಜಿಯರಂತೆ. ಹಾಗೆಯೇ ಮೊಮ್ಮಕ್ಕಳಿಗೆ ಗೊಂಬೆಗಳಾಗಿ ಮೊಮ್ಮಕ್ಕಳನ್ನು ತಮ್ಮ ಗೊಂಬೆಗಳನ್ನಾಗಿಸಿಕೊಂಡು ಮನರಂಜಿಸಿದವರು, ಜೊತೆಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಕಲಿಸಿದವರು,ಮಾರ್ಗದರ್ಶಿಸಿದವರು ನಮ್ಮಜ್ಜ.
ನಸುಕಿನಲ್ಲೆದ್ದು ಮನೆಯ ಹಿತ್ತಿಲಿನಲ್ಲಿರುವ ತೊಂಡೆ, ಸೀಮೇ ಬದನೆ, ಕುಂಬಳಕಾಯಿ ಬಳ್ಳಿಗಳನ್ಜು ಮುಟ್ಟಿ ತಡವಿ, ಕೊತ್ತಂಬರಿ, ಹರವೆ ಬೀಜಗಳನ್ನು ನೆಡಲು ಪಾತಿ ಮಾಡಿ ,ಅಂಗಳದ ಹೂಗಿಡಗಳ ಬುಡಕ್ಕೆ ಮಣ್ಣು ಹೊಂದಿಸಿ, ನೀರುಹಾಕಿ ಪೋಷಿಸುವುದರಿಂದ ಅವರ ದಿನಚರಿ ಶುರುವಾಗುತ್ತಿತ್ತು.ಅವರಿದ್ದಾಗ ಒಮ್ಮೆಯೂ ಕೊತ್ತಂಬರಿ, ಬಸಳೆಯನ್ನು ಸಂತೆಯಿಂದ ದುಡ್ಡಿಗೆ ಕೊಂಡು ತಂದದ್ದಿಲ್ಲ.
ತಿಂಡಿ ತಿಂದು ಸ್ನಾನ ಮುಗಿಸಿ, ಭೈರಾಸನ್ನುಟ್ಟು ಮಡಿಯಿಂದ ಹಿತ್ತಾಳೆ ತಂಬಿಗೆಯಲ್ಲಿ ಬಾವಿಯಿಂದ ನೀರು ಸೇದಿ ದೇವರ ಪೂಜೆಗೆ ಕೂತರೆ ಇನ್ನು ಏಳೋದು ಗಂಟೆ ಹನ್ನೆರಡಾದ ಮೇಲೆಯೇ. ಪೂಜೆ,ಅಭಿಷೇಕ ಮಂತ್ರಗಳಿಗೆ ಜೊತೆಯಾಗುತ್ತಿದ್ದದ್ದು ಅವರ ಬಳಿ ಇದ್ದ ಅವರಷ್ಟೇ ವಯಸ್ಸಾದ ಟ್ರಾನ್ಸಿಸ್ಟರ್ ಅದಕ್ಕೆ ಚರ್ಮದ ಕವರ್ ಇರುತ್ತಿದ್ದುದರಿಂದ ಮನೆಯ ಇತರರು ಯಾರದರೂ ಅದನ್ನು ದೇವರ ಮನೆಯಲ್ಲಿ ತಂದಿಡಬೇಕಾಗಿತ್ತು. ಮೆಲುದನಿಯಲ್ಲಿ ಟ್ರಾನ್ಸಿಸ್ಟರ್ ಉಲಿಯುತ್ತಿದ್ದರೆ ಇತ್ತ ಅಜ್ಜ ತನ್ನ ಕೈಂಕರ್ಯದಲ್ಲಿ ಮಗ್ನನಾಗಿರುತ್ತಿದ್ದರು. ಯಾರಾದರ ಮನೆಗಳಲ್ಲಿ ಆಕಳುದನಗಳಿಗೆ ಹುಶಾರು ತಪ್ಪಿದ್ದಲ್ಲಿ ಅವುಗಳಿಗೆ ಕಟ್ಟಲು ಕಪ್ಪು ದಾರವನ್ನು ಮಂತ್ರಿಸಿ ಕೊಡುತ್ತಿದ್ದರು . ಸಮಾಜದ ದೇವಸ್ಥಾನದಲ್ಲಿರುವ ಅರ್ಚಕರಿಗೆ ಸೂತಕ ಬಂದಾಗ ಅಜ್ಜನೇ ಪಂಚಗವ್ಯ ಸೇವಿಸಿ, ಗರ್ಭಗುಡಿಯಲ್ಲಿರುವ ದೇವರನ್ನು ಪೂಜಿಸಿದ್ದಿದೆ. “ಎಲ್ಲರೂ ಹೊರಗೆ ನಿಂತು ಭಯಭಕ್ತಿಯಿಂದ ಪೂಜಿಸುವ ದೇವರ ಮೂರ್ತಿಗೆ ಮುಟ್ಟಲು ಭಯ ಆಗೋಲ್ವಾ” ಎಂದು ಕೇಳಿದರೆ, “ಗೊತ್ತಿದ್ದೂ ಗೊತ್ತಿದ್ದೂ ಬೇರೆಯವರಿಗೆ ಕೇಡು ಮಾಡಿದ್ದರೆ, ಮನಸ್ಸು ನೋಯಿಸಿದ್ದರೆ ಮಾತ್ರ ಅದು ಪಾಪ. ನನಗೆ ಆ ದೇವರನ್ನು ಮುಟ್ಟಲು ಸಿಕ್ಕಿದ್ದಕ್ಕೆ ಭಯವಲ್ಲ, ಖುಶಿಯಿದೆ ” ಅನ್ನುತ್ತಿದ್ದರು . ಅನಂತ ಚತುರ್ದಶಿ, ಕಾರ್ತೀಕ ಮಾಸದಲ್ಲಿ ದೇವಸ್ಥಾನದ ಕಾರ್ಯ ಕಲಾಪಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.
ಹುಣ್ಣಿಮೆ ಅಮಾವಾಸ್ಯೆ ದಿನಗಳಂದು ಕಾಗೆಗೆ ಎಡೆ ಇಟ್ಟ ನಂತರವೇ ಎಲ್ಲರಿಗೂ ಊಟ. ಅಜ್ಜನದ್ದು ದೊಡ್ಡ ಭಾರವಾದ ತಟ್ಟೆ, ಊಟಕ್ಕೆ ಸಕ್ಕರೆ ಅಥವಾ ಬೆಲ್ಲ ಕಡ್ಡಾಯವಾಗಿ ಬಡಿಸಬೇಕಿತ್ತು. ಇನ್ನು ಬಿಸಿಬಿಸಿಯಾಗಿರುವಾಗಲೇ ಮೊಮ್ಮಕ್ಕಳು ಉಣ್ಣಲಿ ಎಂದು “ಯಾರು ಮುಂಚೆ ಊಟ ಮುಗಿಸ್ತಾರೆ ನೋಡುವಾ” ಅನ್ನೋರು. ನಾವೆಲ್ಲಾ ಮುಗಿಬಿದ್ದು ಊಟ ಮುಗಿಸಿ ಅಲ್ಲಿರೋ ಸೆಣಬಿನ ಹುರಿಯ ತುಂಡನ್ನು ಅಜ್ಜನ ಕಿವಿಮೇಲೆ ಇರಿಸಿ” ಹಾರೀ ಹೂರೀ ಕಾನ್ನಾಕ ದೋರೀ” ಅಂತ ಹಾಡುತ್ತಿದ್ದೆವು. ನಮಗದು ಮೋಜಾದರೆ ಅಜ್ಜನಿಗೆ ಮೊಮ್ಮಕ್ಕಳನ್ನು ಉಪಾಯವಾಗಿ ಊಟ ಮಾಡಿಸಿದೆನೆಂದು ಹೆಮ್ಮೆ .
ಚಿಕ್ಕಪ್ಪನ ಕಿರಾಣಿ ಅಂಗಡಿಯ ವ್ಯಾಪಾರದಲ್ಲಿ ಅಜ್ಜ ಸಹಾಯ ಮಾಡುತ್ತಿದ್ದರು . ಜುಬ್ಬದಂತೆ ಕಾಣೋ ಉದ್ದನೆಯ ಅಂಗಿ,ದೊಡ್ಡದಾದ ಚಪ್ಪಲಿಗಳನ್ನು ಧರಿಸಿ ಅಂಗಡಿಗೆ ಹೊರಟರೆಂದರೆ ಹೆಜ್ಜೆ ಲೆಕ್ಕ ಶುರು ವಾಗುತ್ತಿತ್ತು, ಇಲ್ಲಿಂದ ಐನೂರು ಹೆಜ್ಜೆಗೆ ರೈಲ್ವೇ ಟ್ರ್ಯಾಕು, ಮುಂದೆ ಇನ್ನೊಂದು ನೂರು ಹೆಜ್ಜೆಗೆ ಹಿರಿಮಗನ ಆಫೀಸು, ಅಲ್ಲಿಂದ ಇನ್ನೊಂದೈನೂರು ಹೆಜ್ಜೆಗೆ ಕಟ್ಟಿಗೆ ಡೀಪೋ.ಹೀಗೇ ಕರಾರುವಕ್ಕಾದ ಹೆಜ್ಜೆ ಲೆಕ್ಕ. ಪ್ರತಿದಿನ ಸಾಯಂಕಾಲ ಚಾ ಕುಡಿದಾದ ಮೇಲೆ ಹೊರಜಗಲಿಯಲ್ಲಿ ಕುಳಿತು ಗೋಣೀ ಚೀಲದ ದಾರ ಬಿಡಿಸುತ್ತಿದ್ದರು .ಅಂಗಡಿಯ ಸಾಮಾನುಗಳ ಪೊಟ್ಟಣಗಳನ್ನು ಕಟ್ಟಲು ಆ ದಾರ ಉಪಯೋಗಕ್ಕೆ ಬರುತ್ತಿತ್ತು, ಗ್ರಾಹಕರು ಕೊಂಡ ದಿನಸಿಯನ್ನು ಕಟ್ಟುವ ಕಾಗದದ ಖೊಟ್ಟೆ ಗಳನ್ನೂ ಅವರೇ ಮಾಡುತ್ತಿದ್ದರು. ಆ ಖೊಟ್ಟೆಗಳಿಗೆ ಹಚ್ಚಲು ಮೈದಾ ಹಿಟ್ಟಿನ ಗೋಂದನ್ನು ಖುದ್ದಾಗಿ ಮನೆಯಲ್ಲೇ ತಯಾರಿಸುತ್ತಿದ್ದರು. ಗೋಂದು ೩-೪ ದಿನ ಕೆಡದಿರಲೆಂದು ಅದಕ್ಕೆ ಮೈಲುತುತ್ತ (ಕಾಪರ್ ಸಲ್ಫೇಟ್)ದ ನೀಲಿ ಹರಳುಗಳನ್ನು ಬೆರೆಸುತ್ತಿದ್ದರು. ಶಾಲೆಯಲ್ಲಿ ಗೆಳತಿಯರಿಗೆ ಪಾಠದಲ್ಲಿ ಮೈಲುತುತ್ತದ ಬಗ್ಗೆ ಕೇಳಿ ತಿಳಿದಿದ್ದರೆ ನಮ್ಮ ಮನೆಯ ಗಾಜಿನ ಜಾಡಿಯಲ್ಲಿ ಖಾಯಂ ಆಗಿರುತ್ತಿದ್ದ ಆ ನೀಲಿ ಹರಳುಗಳನ್ನು ನೋಡಿ ನಾವು ಬೀಗುತ್ತಿದ್ದೆವು. ಹೀಗೆ ನ್ಯೂಸ್ ಪೇಪರ್ ನಿಂದ ಕಾಗದದ ಪೊಟ್ಟಣಗಳನ್ನು ಮಾಡಬೇಕಾದ್ರೆ ನಮ್ಮನ್ನೆಲ್ಲ ಸುತ್ತಲೂ ಕೂರಿಸಿಕೊಂಡು ಪರಿವಿಡಿ ಹೇಳಿ ಕೊಡುತ್ತಿದ್ದರು. “ ಒಂದ್ ಕಾಲ್ ಕಾಲು, ಎರಡ್ ಕಾಲ್ ಅರ್ಧ, ಮೂರ್ ಕಾಲ್ ಮುಕ್ಕಾಲು, ನಾಲ್ಕ್ ಕಾಲ್ ಒಂದು” ಹೀಗೆ ಕಾಲು ಮಗ್ಗಿ , ನಕ್ಷತ್ರಗಳು, ಮಾಸಗಳು ಕೊನೆಗೆ ಸಂವತ್ಸರಗಳನ್ನು ಹೇಳಿಸಿದ ನಂತರ ಪರಿವಿಡಿ ಮುಗಿಯುತ್ತಿತ್ತು. ಸುಮಾರು ಏಳು ಗಂಟೆಯಷ್ಟರಲ್ಲಿ ಮನೆ ಎದುರಿನಲ್ಲಿರುವ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಬರುತ್ತಿದ್ದರು.ವಾರದಲ್ಲಿ 2-3 ದಿವಸ ರಾತ್ರಿ ಫಳಹಾರ ಮಾಡುವ ಅಜ್ಜನಿಗೆಂದು ಮಾಡಿದ ಬಾಳೆ ಎಲೆಮೇಲೆ ತಟ್ಟಿದ ರೊಟ್ಟಿ ನಮಗೇನೋ ಪಂಚಭಕ್ಷ್ಯದಂತೆ ರುಚಿಸುತ್ತಿತ್ತು. ಮಣೆ ಹಾಕಿ ಅಜ್ಜ ಫಳಾರಕ್ಕೆ ಕುಳಿತರೆ ಆಗಲೇ ಊಟ ಮುಗಿಸಿದ ನಾವು ಅವರ ಹಿಂದೆ ಮುಂದೆ ಕಂಬಕ್ಕೆ ಜೋತು ಬೀಳುತ್ತಾ ಅಂಡು ಸುತ್ತ ಬೆಕ್ಕಿನಂತೆ ಆಡುತ್ತಿದ್ದೆವು. ಇದನ್ನು ತಿಳಿದ ಅಜ್ಜಿ ೧-೨ ರೊಟ್ಟಿ ಜಾಸ್ತಿಯೇ ಮಾಡಿರುತ್ತಿದ್ದರೂ ಅಜ್ಜ ತನ್ನ ತಟ್ಟೆಯಿಂದ ರೊಟ್ಟಿಯನ್ನು ತ್ರಿಕೋನಾಕರದಲ್ಲಿ ಮುರಿದು ಕೈಗಿತ್ತರೆ ಅದೇನೋ ಖುಷಿ.
ಅವರು ಹಜಾರದಲ್ಲಿ ಕುಳಿತಾಗ ನಾವೇನಾದರೂ ಅತ್ತ ಸುಳಿದರೆ ಹತ್ತಿರ ಕರೆದು ಜೇಬಿಂದ ಚಿಕ್ಕಿ, ಡ್ರೈ ರಸಗುಲ್ಲ ಕೊಟ್ಟು” ತಗೋ,ತಿನ್ನು “ ಅನ್ನೋವ್ರು,. ಅವರ ಬನಿಯಾನಿನ ಜೇಬು ಅಕ್ಷಯ ಪಾತ್ರೆಯಂತೆ. ಯಾವಾಗಲೂ ಏನಾದರೂ ಇದ್ದೇ ಇರುತ್ತಿತ್ತು. ನಾವೇನೋ ಅಜ್ಜ ನನಗೆ ಮಾತ್ರ ತಿಂಡಿ ಕೊಟ್ರು ಅನ್ನೋ ಸಂತೋಷದಲ್ಲಿ ಹಿರಿಹಿರಿ ಹಿಗ್ಗಿದರೆ ಅದೇ ತಿಂಡಿ ಉಳಿದ ಮೊಮ್ಮಕ್ಕಳಿಗೂ ಸಿಕ್ಕಿರುತ್ತಿತ್ತು!! ಕೆಲವೊಮ್ಮೆ ನಾಲ್ಕಾಣೆ , ಎಂಟಾಣೆಯನೂ ಕೊಟ್ಟಿದ್ದುಂಟು. ಮನೆಕೆಲಸ,ಅಡುಗೆ ಹೆಂಗಸರಿಗೆ ಮೀಸಲು ಎಂದು ನಂಬುತ್ತಿದ್ದ ಕಾಲದಲ್ಲಿ ಅಜ್ಜನವರು ವಿಶೇಷ ತಿಂಡಿಗಳಾದ ಬೇಸನ್ ಲಾಡು, ಮಂಡಿಗೆ, ಕರ್ಜೀಕಾಯಿ ಜೊತೆಗೆ ಮೈಸೂರುಪಾಕನ್ನೂ ಸ್ವತಃ ತಯಾರಿಸುತ್ತಿದ್ದರು. ಮನೆಯ ಹೆಂಗಸರು ಹಿಟ್ಟು ನಾದಲು, ಕರಿದ ತಿಂಡಿಗಳನ್ನು ಡಬ್ಬಕ್ಕೆ ತುಂಬಿಸಲು ಅವರಿಗೆ ಸಹಾಯ ಮಾಡಿದರೆ ಸಾಕಿತ್ತು.
ಗಣೇಶನ ಹಬ್ಬಕ್ಕೆ ಇನ್ನೂ ಒಂದೂವರೆ ತಿಂಗಳಿರುವಾಗಲೇ ಮನೆಯ ಸಮೀಪದಲ್ಲಿರುವ
ವರದಾ ನದಿಗೆ ಹೋಗಿ ಜೇಡಿ ಮಣ್ಣನ್ನು ತಂದು ಅದನ್ನು ಹದ ಮಾಡಿ ಗಣಪತಿಯ ವಿಗ್ರಹ ತಯಾರಿಸುತ್ತಿದ್ದರು. ಹಬ್ಬದ ಮುನ್ನಾದಿನ
ರಾತ್ರಿ ಆ ವಿಗ್ರಹಕ್ಕೆ ಕಣ್ಣು ಬಿಡಿಸಿ, ಆಭರಣ ಮತ್ತು
ಕಿರೀಟಕ್ಕೆ ಸುನೇರಿ ಬಣ್ಣವನ್ನು ಕಲಸಿ ತೆಳು ಬ್ರಷ್ ನಿಂದ ನಾಜೂಕಾಗಿ ಲೇಪಿಸುತ್ತಿದ್ದರು . ನಮಗೇನಿದ್ದರೂ
ಆ ಇಲಿ, ಮೋದಕಕ್ಕೆ ಬಣ್ಣ ಹಚ್ಚೋವಷ್ಟು ಅವಕಾಶ ಕೊಡುತ್ತಿದ್ದರು. ನಾವೇನಾದರೂ ಪರಸ್ಪರ ಜಗಳವಾಡಿಕೊಂಡರೆ
ಅವರ ಬಾಯಿಂದ ಬರುತ್ತಿದ್ದದ್ದು ಒಂದೇ ಬೈಗುಳ “ಯಾರಲ್ಲಿ, ಇವ್ರ ಬಾಯಿಗೆ ಒಂದಿಷ್ಟ್ ಬೆಲ್ಲದ್ ಚೂರ್ ಹಾಕಾ” ಅನ್ನೊವ್ರು.ಕೊನೆಗೆ
ಮಕ್ಕಳನ್ನು ಬೈದದ್ದಕ್ಕೆ ಬೇಜಾರಾಗಿ “ಮಕ್ಕಳು ಆಡ್ತಾ, ಜಗಳ ಆಗೇ ಆಗ್ತಾವೆ, ಆದ್ರೆ ಒಂಚೂರು ನಿಧಾನ ಜಗಳ ಆಡಿ ” ಎಂದು ಸಮಾಧಾನ ಮಾಡುತ್ತಿದ್ದರು.ನನಗೆ ಮತ್ತು
ಅಕ್ಕನಿಗೆ ಹೊಸದಾಗಿ ಕೊಂಡ ಲೇಡಿಸ್ ಸೈಕಲನ್ನು ತುಳಿಯಲು
ಕಲಿಸಿದ್ದೇ ಅಜ್ಜ .ಒಂದು ದಿನ ಹೊಲಿಗೆ ಮಿಶನ್ ಗೆ ಅವರು ದಾರ ಪೋಣಿಸುತ್ತಿರುವಾಗ ಪಕ್ಕದಲ್ಲಿ ನಿಂತ ನಾನು ಗೊತ್ತಿಲ್ಲದೇ ಅದರ ಚಕ್ರವನ್ನು ತಿರುಗಿಸಿದ್ದೆ, ಸೂಜಿ
ಅಜ್ಜನ ಉಗುರಿನ ಬುಡಕ್ಕೆ ಚುಚ್ಚಿ ಅಜ್ಜ ಮೂರ್ಛೆ ಹೋಗಿದ್ದರು,ಎಚ್ಚರ ಬಂದ ಮೇಲೆ “ಸುಮ್ನಿರು, ಬೈಸಿಕೊಳ್ತೀಯ” ಅಂತ ಸನ್ನೆ ಮಾಡಿ, ತನ್ನಿಂಧ್ಲೇ ಹಾಗಾಗಿದ್ದು ಅಂತ ನನ್ನನ್ನು ಇಕ್ಕಟ್ಟಿನಿಂದ
ಪಾರು ಮಾಡಿದ್ದರು.
ಮನೆಯಿಂದ ಟಿಫಿನ್ ಕಟ್ಟಿಕೊಂಡು ಹೋಗುತ್ತಿದ್ದ ನಾವು ಕಾಲೇಜಿಂದ ಮನೆಗೆ ಬಂದ ಮೇಲೆ ಊಟ ಮಾಡುತ್ತಿದ್ದೆವು, ಅಜ್ಜಿ , ಅಮ್ಮ ಚಿಕ್ಕಮ್ಮಂದಿರು ಮಲಗಿರುತ್ತಿದ್ದರು, ಅವರನ್ನು ಎಬ್ಬಿಸದೇ ನಾವೇ ತಟ್ಟೆಗೆ ಬಡಿಸಿಕೊಂಡು ಉಣ್ಣಬೇಕಾದರೆ “ ನೀರು ಇಟ್ಟು ಕೊಂಡಿದೀಯಾ? ನಾ ಬಡಿಸಲಾ? ಸ್ವಲ್ಪ ಬಿಸಿ ಮಾಡಿಕೊಡ್ಲಾ?” ಅಂತ ಆರಾಮಕುರ್ಚಿಯಲ್ಲಿ ಕೂತ ಅಜ್ಜ ಕೇಳಿದರೆ,ನಮಗೋ ಹಸಿವಿನ ಜೊತೆ ಕೋಪವೂ ಉಕ್ಕಿ “ ಬಡಿಸು ಅಂದ್ರೆ ನಿಂಗೆ ಕಾಣತ್ತಾ ಆಬ್ಬೂ, ಅಮೇಲೆ ಮುಸುರೆ , ಮಡಿ ಎಲ್ಲ ಒಂದು ಕಡೆ ಮಾಡಿ ಬಿಡ್ತೀಯಾ” ಅಂತ ಅವರೇ ತಿಳಿಸಿಕೊಟ್ಟ ಸಂಸ್ಕಾರಗಳನ್ನು ಅವರೇ ತಪ್ಪುವ ಬಗ್ಗೆ ರೇಗುತ್ತಿದ್ದೆವು. ಅವರಿಗೆ ಪದೇ ಪದೇ ಸಕ್ಕರೆ ತಿನ್ನುವ ಅಭ್ಯಾಸವಿತ್ತು. ಮಂಡಕ್ಕಿಗೆ ಬೆಲ್ಲವನ್ನು ಬೆರೆಸಿ ತಿನ್ನುತ್ತಿದ್ದರು.ಬೀಪಿ, ಶುಗರ್ ನಂತಹ ಕಾಯಿಲೆಗಳಿಲ್ಲದಿದ್ದರೂ ಅಷ್ಟು ಸಕ್ಕರೆ ಒಳ್ಳೆಯದಲ್ಲವೆಂದು ಸಕ್ಕರೆ ಡಬ್ಬವನ್ನು ಅಜ್ಜನಿಗೆ ಸಿಗದೇ ಮುಚ್ಚಿಡುತ್ತಿದ್ದರು . ಒಮ್ಮೆ ಮುಚ್ಚಿಟ್ಟ ಸಕ್ಕರೆ ಡಬ್ಬವನ್ನು ಅಜ್ಜ ತೆಗೆದುಕೊಳ್ಳಲು ಹೋದಾಗ ನಾನೇ ಅದರ ಜಾಗವನ್ನು ಬದಲಾಯಿಸಿದ್ದೆ. ಅಜ್ಜ ನನ್ನನ್ನೊಮ್ಮೆ ದುರುಗುಟ್ಟಿ ನೋಡಿ ಮಂಚಕ್ಕೆ ಹೋಗಿ ಒರಗಿದ್ದರು. ಈಗಲೂ ಆ ದೃಶ್ಯ ನನ್ನ ಕಣ್ಣ ಮುಂದಿದೆ.
ಆಪರೇಶನ್ ಎಂಧರೆ ಭಯಬೀಳುತ್ತಿದ್ದ ಅಜ್ಜನಿಗೆ ಅಂತೂ ಹೇಗ ಅಪ್ಪ, ಚಿಕ್ಕಪ್ಪಂದಿರೆಲ್ಲ ಒಪ್ಪಿಸಿ ಶಿವಮೊಗ್ಗೆಗೆ ಕರೆದುಕೊಂಡು ಹೋಗಿ ಕಣ್ಣು ಆಪರೇಶನ್ ಮಾಡಿಸಿದ್ದಾಯಿತು. ದನಿ ಮತ್ತು ಮೈಕಟ್ಟಿನ ಅಂದಾಜಿನ ಮೇಲೆ ಮನೆಯ ಸದಸ್ಯರನ್ನು ಗುರುತಿಸುತ್ತಿದ್ದ ಅಜ್ಜನ ಕಣ್ಣುಗಳು ಈಗ ಸಂಪೂರ್ಣ ಚುರುಕಾಗಿದ್ದವು .”ಅರೇರೇರೆ ಅದೆಷ್ಟು ಕಪ್ಪಾಗಿದಿಯೋ,ಉದ್ದ ಬೇರೆ ಆಗಿದೀಯಾ “ ಅಂತ ತಮ್ಮನಿಗೂ “ಏನೇ ಇದು ಗುಂಗುರು ಕೂದಲು ನಿಂಗೆ “ ಅಂತ ತಂಗಿಗೂ ನೋಡಿ ಅಜ್ಜ ಆಶ್ಚರ್ಯಪಟ್ಟಿದ್ದೇಪಟ್ಟಿದ್ದು. ಟೀವಿಯ ಕೆಳಭಾಗದಲ್ಲಿ ಬರುತ್ತಿದ್ದ ಟ್ರೇಲರನ್ನು ತಪ್ಪಿಲ್ಲದೇ ಓದುತ್ತಿದ್ದರು, ಮನೆ ಎದುರಲ್ಲಿ ಹಾದುಹೋಗುವ ಬಸ್ಸುಗಳ ಬೋರ್ಡನ್ನು ಕುಳಿತಲ್ಲೇ ಓದೋಕಾಗತ್ತೆ ಅಂತ ಅವರಿಗೆ ಖುಶಿಯಾದರೆ ಬರೀ ಏಳನೇ ಕ್ಲಾಸ್ ಓದಿದ ಅಜ್ಜನಿಗೆ ಇಷ್ಟು ಚೆನ್ನಗಿ ಕನ್ನಡ ,ಇಂಗ್ಲೀಷ್ ಓದಲು ಬರುತ್ತೆ ಅಂತ ನಮಗೆ ಅಚ್ಚರಿ .
ಇಷ್ಟಕ್ಕೆ ಮುಪ್ಪು ನಿಲ್ಲಲಿಲ್ಲ, ಮರಿಮಕ್ಕಳನ್ನು ಮುದ್ದಾಡುವ ಅವಕಾಶವೂ ದೊರೆಯಿತು. ಹಳೆಯ ವಿಷಯಗಳನ್ನು ಸರಿಯಾಗಿಯೇ ನೆಪಿಟ್ಟುಕೊಳ್ಳುತ್ತಿದ್ದ ಅಜ್ಜ, ಹೊಸ ವಿಷಯಗಳನ್ನು ಮರೆಯಲಾರಂಭಿಸಿದರು, ತಮ್ಮ ಅಂಗಡಿ ಮುಗ್ಗಟ್ಟಿಗೆ ಇರುವ ಹಲಗೆಗಳ ಲೆಕ್ಕವನ್ನು ಹೇಳುತ್ತಿದ್ದ ಅಜ್ಜ ಊಟ ,ತಿಂಡಿ ಮಾಡಿದ್ದನ್ನೇ ಮರೆಯುತ್ತಿದ್ದರು, ಪಾಪ, ಕೆಲವೊಮ್ಮೆ ೨-೨ ಸಲ ಊಟ ಮಾಡಿದ್ದುಂಟು. ಎರಡನೇ ಸಲ ಊಟಕ್ಕೆ ಕುಳಿತಾಗ ಯಾಕೋ ಇವತ್ತು ಊಟ ಸೇರುತ್ತಿಲ್ಲವೆಂದು ಅರ್ಧಕ್ಕೆ ಕೈತೊಳೆದದ್ದುಂಟು. ಆಗೆಲ್ಲ ನಮಗೆ ವಿಚಿತ್ರ ಸಂಕಟವಾಗುತ್ತಿತ್ತು. ಮುದುಕಿ, ಅಡಗೂಲಜ್ಜಿ, ಮರೆಗುಳಿ ಅನ್ನೋ ಪದಗಳನ್ನು ಬರೀ ಹಾಸ್ಯದಲ್ಲಿ ಬಳಸುತ್ತಿದ್ದ ನಮಗೆ ಅದರ ನಿಜವಾದ ಅರ್ಥ ತಿಳಿಯತೊಡಗಿತ್ತು. ಆಗಲೇ ಒಮ್ಮೆ ಹಿತ್ತಿಲಲ್ಲಿ ಕಾಲು ಜಾರಿ ಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟಾಗಿತ್ತು. ಆದರೂ ಮನೆಯವರ ಆರೈಕೆ, ಅಜ್ಜಿಯ ತಾಳ್ಮೆ ಅಜ್ಜನಿಗೆ ಸೋಲಲು ಬಿಡಲಿಲ್ಲ.
ಬೆಳಗೆದ್ದು ಕೆಲಸಕ್ಕೆ ಹೋಗುವ ಮುನ್ನ ಅಪ್ಪ, ಚಿಕ್ಕಪಂದಿರು
ತಮ್ಮ ಅಪ್ಪನಿಗೆ ನಿತ್ಯ ಕರ್ಮಗಳನ್ನು ಮಾಡಿಸಿ, ಬೆಡ್ ಸೋರ್ ಆಗದಂತೆ ಮೈಗೆ ಕ್ರೀಮ್, ಪೌಡರ್ ಲೇಪಿಸಿ
ಶುಭ್ರ ಬಟ್ಟೆಗಳನ್ನು ತೊಡಿಸುತ್ತಿದ್ದರು, ಮಧ್ಯದಲ್ಲೇನಾದರೂ
ಸಹಾಯ ಬೇಕಾದರೆ ಅಮ್ಮ, ಚಿಕ್ಕಮ್ಮಇಬ್ಬರೂ ಸೇರಿ ಅವರನ್ನು ಬಚ್ಚಲಿಗೆ ಕರೆದು ಕೊಂಡು ಹೋಗುತ್ತಿದ್ದರು.
ಅಜ್ಜ ತಾವು ಬದುಕಿರುವವರೆಗೂ ತಮ್ಮ ತಂದೆತಾಯಿಯ ಕ್ರಿಯಾಕರ್ಮಗಳನ್ನು ಶಾಸ್ತ್ರೋಕ್ತವಾಗಿ ಮನೆಯಲ್ಲೇ
ಮಾಡುತ್ತಿದ್ದರು.
ಕೊನೆಗೆ ಹೆಚ್ಚುಕಡಿಮೆ ಎರಡು ತಿಂಗಳು ಹಾಸಿಗೆ
ಹಿಡಿದು ಒಂದು ದಿನ ಅಜ್ಜ ನಮ್ಮನ್ನಗಲಿದರು . ತೀರಿಕೊಂಡ
ವಿಷಯ ತಡರಾತ್ರಿಯಲ್ಲಿ ತಿಳಿಯಿತಾದರೂ ಬೆಂಗಳೂರಿನಿಂದ
ಸಾಗರಕ್ಕೆ ಹೋಗೋದು ಕಷ್ಟವೇನಿರಲಿಲ್ಲ. ಸದಾ ಉತ್ಸಾಹದ ಚಿಲುಮೆಯಾಗಿದ್ದ ಅಜ್ಜನನ್ನು ಶವವಾಗಿ ಮಲಗಿದ್ದನ್ನು ನೋಡಲು ಮನಸ್ಸು ಒಪ್ಪಲಿಲ್ಲ. ಇದೇ
ಕೊನೆಯ ಬಾರಿ ಅವರನ್ನು ನೋಡಲು ಸಿಗುವುದೆಂಬ ಖಾತ್ರಿಯಿದ್ದರೂ ಹೋಗುವ ಧೈರ್ಯವಿರಲಿಲ್ಲ. ಅವರೊಂದಿಗೆ
ಕಳೆದ ಖುಶಿಯ ದಿನಗಳ ಜೊತೆಜೊತೆಗೆ ನಾವು ಅವರಿಗೆ ಎದುರಾಡಿದ್ದ ಮಾತುಗಳೂ ಕಾಡತೊಡಗಿದವು. ಕ್ರಿಯಾಕರ್ಮದ
ದಿನ ಕಾಗೆಯು ಎಡೆಯಿಟ್ಟ ಎಲೆಯನ್ನು ಮುಟ್ಟದಿದ್ದಾಗ ತೀರಿಕೊಂಡವರ ಆಸೆಯೊಂದು ಬಾಕಿಯಿದೆ ಎಂಬ ನಂಬಿಕೆಯಿದೆ.
ಎಲ್ಲಾ ರೀತಿಯ ಕನಸುಗಳನ್ನು ಸಾಕರಗೊಳಸಿಕೊಂಡ ಅಜ್ಜನಿಗೆ
ಉಳಿದ ಆಸೆಯೇನು ಎಂದು ತಿಳಿಯದೇ ಕೊನೆಯಲ್ಲಿ ಚಿಕ್ಕಪ್ಪ ಒಂದಿಷ್ಟು ಬೆಲ್ಲದ ಚೂರುಗಳನ್ನು ಹಾಲಲ್ಲಿ
ಬೆರೆಸಿ ಆ ಅನ್ನದ ಮೇಲೆ ಹಾಕಿದರು. ಕೂಡಲೇ ಕಾಗೆಗಳು ಮುತ್ತಿಕೊಂಡವು .
ಅಪ್ಪ ಚಿಕ್ಕಪ್ಪಂದಿರು ನಮಗೆ ಸಪೋರ್ಟಿಂಗ್ ಆಕ್ಟರ್
ಗಳಂತೆ ಕಂಡರೆ ಹೀರೋ ಸ್ಥಾನವನ್ನು ಅಜ್ಜ ತುಂಬಿದ್ದರು. ಡಬ್ಬಕ್ಕೆ ಸಕ್ಕರೆ ಸುರುಗುವಾಗಲೋ, ಯಾರಾದರೂ ಸಿಹಿತಿಂಡಿಕೊಟ್ಟಾಗಲೋ ನಾನು ಮುಚ್ಚಿಟ್ಟ ಆ ಸಕ್ಕರೆ ಡಬ್ಬದ ವಿಷಯ ನೆನಪಾಗಿ ಕೈ ಒಮ್ಮೆ ತಡೆಯುತ್ತದೆ.
ದಿನಕ್ಕೆ ಎರಡು ಮೂರು ಸಾರಿಯಾದರೂ ಸಕ್ಕರೆ , ಬೆಲ್ಲ , ಪುಟಾಣಿ( ಹುರಿಗಡಲೆ) ಬೇಕು ಎಂದು ಪೀಡಿಸಿ
, ಅದನ್ನು ಪ್ಲೇಟಲ್ಲಿ ಹಾಕಿ ನೆಕ್ಕುತ್ತಾ ಟೀವಿ ಮುಂದೆ
ಕುಳಿತ ಮಗಳಲ್ಲಿ ಅಜ್ಜನನ್ನು ಕಾಣುವ ಪ್ರಯತ್ನ ಮಾಡುತ್ತೇನೆ. ಅಪ್ಪಂದಿರ ದಿನದಂದು ಎಲ್ಲರೂ ಅಪ್ಪನಿಗೆ ಶುಭ
ಕೋರಿದರೆ ನಮಗೆ ಅಪ್ಪನಿಗಿಂತ ದುಪ್ಪಟ್ಟು ಪ್ರೀತಿ ತೋರಿದ ಅಜ್ಜ ನೆನಪಾದರೆ ಆಶ್ಚರ್ಯವಿಲ್ಲ.