ಒಂದು ತಂಬಿಟ್ಟಿನ ಕತೆ

 

ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ ಇದ್ದಿದ್ದು ಮೂರೇ ಮೂರು ಟಾಕೀಸು. ಆಸ್ಫೋಟ, ಆಕಸ್ಮಿಕ , ಜೀವನಚೈತ್ರ ಇವೆಲ್ಲ ಸಿನೆಮಾಗಳು ನಮ್ಮೂರು  ಸಾಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದು ಅನ್ನುವ ಕಾರಣಕ್ಕೆ ಥೀಯೇಟರ್ ನಲ್ಲಿ ನೋಡಿದ್ದು, ಅಬ್ಬಬ್ಬಾ ಅಂದ್ರೆ  ಒಟ್ಟಾರೆಯಾಗಿ -೧೦ ಸಿನೆಮಾ ನೋಡಿದ್ದಿರಬಹುದು ಅಷ್ಟೇ.  

 

   ನನಗೆ  ನೆನಪಿದ್ದಂತೆ  ನೋಡಿದ ಮೊದಲ  ಸಿನೆಮಾ ಬಡ್ಡಿ ಬಂಗಾರಮ್ಮ, ಬೇಸಿಗೆ ರಜಕ್ಕೆಂದು ಊರಿಂದ ಬಂದಿರುವ ಅಕ್ಕ -ಅಣ್ಣಂದಿರ  ಜೊತೆಯಲ್ಲಿ ನೋಡಲು ಹೋಗಿದ್ದು, ಥೀಯೇಟರ್ ಅಂಗಳದಲ್ಲಿ ನಾನು ಅದ್ಹೇಗೋ ತಪ್ಪಿಸಿಕೊಂಡು, ಪೆಚ್ಚುಮೋರೆ ಹಾಕಿ ನಿಂತಿದ್ದೆ, ಇನ್ನೇನು ಗಂಗೆ ಭಾಗೀರಥಿ ಸುರಿಸಬೇಕು ಅನ್ನುವಷ್ಟರಲ್ಲಿ ಅತ್ತೆಯ ಮಗಳು ಬಂದು ,"ಇಲ್ಲಿದೀಯಾ ಪುಟ್ಟಿ?" ಅಂತ ನನ್ನನ್ನ ಎತ್ತಿಕೊಂಡು ಸಮಾಧಾನ ಮಾಡಿದ್ದಳು

 

Google Image

   ನಂತರ ನೋಡಿದ ಸಿನೆಮಾ  ರಥಸಪ್ತಮಿ. ಅಕ್ಕನ ಗೆಳತಿಯ ಅಮ್ಮ, ನಾವು ಓದುವ  ಶಾಲೆಯಲ್ಲಿ ಹಿಂದಿ ಟೀಚರ್ ಆಗಿದ್ದರು,  ಹಾಗಾಗಿ ಅವರೊಟ್ಟಿಗೆ ಹೋಗಲು ಮನೆಯಲ್ಲಿ ಒಪ್ಪಿಗೆ ಕೊಟ್ಟಿದ್ದು. ಟೀಚರ್ ಮನೆಯ ನಾಲ್ಕು ಜನ, ನಾನು ಮತ್ತು ಅಕ್ಕ ಸೇರಿ  ಫಸ್ಟ್ ಶೋ ಸಿನೆಮಾಗೆ ಹೋಗಿದ್ದಾಯ್ತು. ಸಿನೆಮಾಗೆ ಹೋಗುವ ಸಂಭ್ರಮ ಒಂದು ಕಡೆ, ಜೊತೆಯಲ್ಲಿರೋದು ಟೀಚರ್ ಅನ್ನೋ ಭಯ ಇನ್ನೊಂದೆಡೆ. ಸಿನೆಮಾ ಶುರುವಾದ ಹತ್ತು  ನಿಮಿಷಕ್ಕೆ ಟೀಚರ್ ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ ಡಬ್ಬಿ ತೆಗೆದು  ನಮ್ಮೆಲ್ಲರಿಗೂ ಒಂದೊಂದು ತಂಬಿಟ್ಟು ಕೊಟ್ಟರು ( ಅದಕ್ಕೆ ತಂಬಿಟ್ಟು ಅಂತಾರೆ ಅಂತಲೂ ಗೊತ್ತಿಲ್ಲ) ನಾನು ಗೋಧಿ ಲಾಡು ಅಂದ್ಕೊಂಡು ಕಚ್ಚಿದರೆ ಗಟ್ಟಿಯಾಗಿದೆ, ಮೊದಲೇ ಎದುರಿನ ಎರಡು ಹಲ್ಲು ಉದುರಿ ಬಾಯಿ ಗ್ಯಾರೇಜ್ ಆಗಿತ್ತು. ಹತ್ತು ಹದಿನೈದು ನಿಮಿಷ ನೆಕ್ಕುತ್ತ ಕೂತರೂ  ಲಾಡಿನ ಒಂದು ಮಿಲಿಮೀಟರ್ ಕೂಡ ಖಾಲಿಯಾಗಿಲ್ಲ. ವಾರೆನೋಟದಲ್ಲಿ ಬಲಗಡೆ  ನೋಡಿದ್ರೆ ಟೀಚರ್ ಕೂತಿದ್ದಾರೆ. ಕಡೆಯಲ್ಲಿ ನನ್ನಕ್ಕ. ಪರ್ವಾಗಿಲ್ವೇ?!  ನಿನ್ನೆ ಮೊನ್ನೆ ದವಡೆ ಬಿದ್ರೂ  ಆಗ್ಲೇ ತಂಬಿಟ್ಟು  ತಿಂದು ಮುಗ್ಸಿದಾಳೆ ಅನ್ನಿಸ್ತು. ಒಂದೆರಡು ಸಲ  ಮೊಣಕೈಯಿಂದ ಅಕ್ಕನ್ನ ತಿವಿದೆ. "ತಿನ್ನು ತಿನ್ನು" ಅಂತ ಸನ್ನೆ ಮಾಡಿದಳು. ಸಿನೆಮಾ ನೋಡೋದಕ್ಕಿಂತ ಲಾಡು ಖಾಲಿ ಮಾಡೋದು ಹೇಗೆ ಅನ್ನೋ ಚಿಂತೆ ಶುರುವಾಯ್ತು. . 

 

    ಈಗ ನಿಧಾನ ಕೈಯ ಹೆಬ್ಬೆಟ್ಟು ತೋರುಬೆರಳು ನೋಯಲು ಶುರುವಾಯ್ತು.. ಆಗ ಸರಿಯಾಗಿ ಇಂಟರ್ವಲ್ ಸಮಯ. "ಅಕ್ಕಾ..ಅಕ್ಕಾ"ಅಂದೆ ."ಏನು?, ಬೇಡ್ವಾ? "ಅಂದಳು. "ಬೇಡ ಅಕ್ಕಾ ಎಷ್ಟು ನೆಕ್ಕಿದ್ರೂ ಖಾಲಿ ಆಗ್ತಿಲ್ಲ " ಅಂದೆ . "ಕೊಡಿಲ್ಲಿ" ಅಂದಳು. ಅಬ್ಬಾ! ಅನ್ನಿಸಿ ಅವಳ ಕೈಗೆ ಕೊಡ್ತಾ ಇದ್ದಂತೆ, ಸರಕ್.. ಎಂದು ಬಗ್ಗಿ, ಅದನ್ನು ಕುಳಿತಿರುವ ಚೇರ್ ಕೆಳಗೆ ಇಟ್ಟುಬಿಟ್ಟಳು. ನಾನು ಭಯ ಮತ್ತು ಗಾಬರಿಯಲ್ಲಿ ನಿಧಾನವಾಗಿ ಬಗ್ಗಿ ನೋಡಿದರೆ  ತಂಬಿಟ್ಟು ಗುಮ್ಮಕೆ ಕುಳಿತಿತ್ತು. ಆದ್ರೆ ಏನಾಶ್ಚರ್ಯ ?! ಅದಕ್ಕೆ ಜೊತೆ ಕೊಡಲು ಅದರ ಪಕ್ಕದಲ್ಲಿ ಇನ್ನೊಂದು ತಂಬಿಟ್ಟು  ಕೂತಿದೆತಕ್ಷಣ ಮೇಲೆದ್ದು ಅಕ್ಕನ ಮುಖ ನೋಡಿದರೆ ಅಕ್ಕ ತುಂಟ ನಗೆ  ಬೀರುತ್ತಿದ್ದಳು. .

 

Popular posts from this blog

ಮನೆಪಾಠ

ಅಜ್ಜನ ನೆನಪು