ತಮಾಷಾ : ಖಂಡಿತ ಇದು ತಮಾಷೆಯಲ್ಲ!!

 

   ಶಾಲೆಗೆ ಹೋಗುವ ಪೋರನಿಗೆ  ವೃದ್ಧನಿಂದ  ಕತೆ ಕೇಳುವ ಕುತೂಹಲ, ಕೇಳಿದಷ್ಟೂ ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುವ ಬಯಕೆ, ಬಹುಶಃ ಈ  connecting the dots ಅವನ ಅಚ್ಚುಮೆಚ್ಚಿನ recreational activity. ಇಲ್ಲಿ ಕಲ್ಪನೆಯೇ ಬಂಡವಾಳ. ನಮ್ಮಿಷ್ಟದ ಅಂತ್ಯ ಕೊಡಬಹುದಾದ ಸ್ವಾತಂತ್ರ್ಯ , ಕನಿಷ್ಠ ಪಕ್ಷ ಇಲ್ಲಾದರೂ ನಮಗೆ ಬೇಕಾದಂತೆ ಬದುಕಬಹುದು ಎನ್ನುವ ಸುಪ್ತಾಲೋಚನೆಯೇ ಆತನನ್ನು ಪದೇ ಪದೇ ಆ ವೃದ್ಧನ ಹತ್ತಿರಕ್ಕೆಳೆದು ತರುತ್ತಿರುತ್ತದೆ.

   ದೂರದ ಕೋರ್ಸಿಕಾ ಹೆಸರಿನ ದ್ವೀಪವೊಂದರಲ್ಲಿ ಲಗೇಜ್ , ಪಾಸ್ಪೋರ್ಟ್ , ಹಣ ಎಲ್ಲವನ್ನೂ ಕಳೆದುಕೊಂಡು ಪರದಾಡುತ್ತಿರುವ ನಾಯಕಿ ತಾರಾಗೆ ಸಂಬಂಧಪಟ್ಟವರಿಗೆ  ಕರೆ ಮಾಡಲು ಸಹಾಯ ಮಾಡಿದ್ದು, ಆ ಹೊತ್ತಲ್ಲಿ ಪರಿಚಯವಾಗಿದ್ದು ಇದೇ ಯುವಕ ವೇದ್.

   ಅದನ್ನು ಪರಿಚಯವಲ್ಲದ ಪರಿಚಯ ಎನ್ನಬಹುದು ಕಾರಣ ಆ ದ್ವೀಪದಲ್ಲಿ ಅವನೊಬ್ಬ ಅನಾಮಿಕ, ಆ ಹೊತ್ತಿಗೆ ಹೊಳೆದಂಥ ಒಂದು ಫ್ಯಾಂಟಸಿ ಹೆಸರನ್ನು ತನ್ನದೆಂದು ಹೇಳಿಕೊಳ್ಳುವ ಇವನು  ತನ್ನ ನೈಜ ಹೆಸರು, ಅಡ್ರೆಸ್ಸು, ಕೆಲಸ -ಕಾರ್ಯ ಯಾವುದನ್ನೂ ಬಿಟ್ಟುಕೊಡದೇ, ಒಂದು ವಾರದ ಮಟ್ಟಿಗೆ  ತನಗೆ ಬೇಕಾದಂತೆ ಮನಸುಪೂರ್ತಿ ಜೀವಿಸಲು ಬಂದಿರುತ್ತಾನೆ.  ಅವನ ಇಂಗಿತವನ್ನು ತಿಳಿದ ನಾಯಕಿ ತಾರಾ ಕೂಡ ತನ್ನ ಐಡೆಂಟಿಟಿಯನ್ನು ಬಿಟ್ಟುಕೊಡದೇ ತಾನೂ ಒಂದು ಕಾಲ್ಪನಿಕ ಹೆಸರನ್ನು ಹೇಳಿ ಪರಿಚಯಿಸಿಕೊಂಡು ಅವನೊಂದಿಗೆ ಆ ಒಂದು ವಾರವನ್ನು ಕಳೆಯುತ್ತಾಳೆ. ಟ್ರಿಪ್ ನಲ್ಲಿ ಸುತ್ತಾಟ, ಮೋಜು, ಮಸ್ತಿಯಲ್ಲಿ ಇಬ್ಬರ ಮನಸ್ಸು ಹತ್ತಿರವಾಗಿದ್ದು ತಿಳಿಯುವುದೇ ಇಲ್ಲ. ಬೀಳ್ಕೊಡುವ ಸಮಯ ಬಂದಾಗ ಬದುಕಲ್ಲಿ ಮತ್ತೊಮ್ಮೆ ಭೇಟಿಯಾಗಬಾರದು ಎಂದೆಣಿಸಿ ಇಬ್ಬರೂ  ಅವರವರ ದಾರಿ ಹಿಡಿಯುತ್ತಾರೆ.

   ತಾರಾಳಿಗೆ  ಹೆಸರೂ ಗೊತ್ತಿಲ್ಲದ ಯುವಕನನ್ನು ಮತ್ತೆ ನೋಡುವಾಸೆ, ಆತನ ಬಿಂದಾಸ್ attitude ಗೆ ಮನಸೂರೆಗೊಂಡ ಕಾರಣ ಅವನೊಂದಿಗೆ ಬದುಕು ಕಟ್ಟಿಕೊಳ್ಳುವ ಕನಸು, ದ್ವೀಪದಲ್ಲಿದ್ದಾಗ ಸಿಕ್ಕ ಅವನ ಬಳಿಯಲ್ಲಿದ್ದ  ಪುಸ್ತಕದಲ್ಲಿದ್ದ ಅಂಗಡಿಯ ಸೀಲ್ ಒಂದರ ಜಾಡು ಹಿಡಿದು, ಅವನು ಸಿಗಬಹುದೆಂಬ ಆಸೆಯಲ್ಲಿ ಪದೇ ಪದೇ ಆ ಕೆಫೆ ಗೆ ಬರುತ್ತಾಳೆ. ಎಣಿಸಿದಂತೆ ಒಂದು ದಿನ ಅವನೂ ಅಲ್ಲಿಗೆ ಬಂದಿರುತ್ತಾನೆ.

   ಅದರೇನಾಶ್ಚಾರ್ಯ?! ಸಂತೋಷದಿಂದ ಅವಳನ್ನ ಮಾತನಾಡಿಸಿ ತನ್ನ ನೈಜ ಹೆಸರನ್ನೂ, ಕೆಲಸ ಕಾರ್ಯ, ಅಡ್ರೆಸ್ ಎಲ್ಲವನ್ನೂ ತಿಳಿಸುವ ವೇದ್ ಬಗ್ಗೆ ಅವಳಲ್ಲಿ ಈಗ ಗೊಂದಲ. ಅಂದು ಸಿಕ್ಕ ಆ ಕೂಲ್ attitude ನ ಹುಡುಗನಂತಿದ್ದ ವ್ಯಕ್ತಿತ್ವ ನಿಜವೇ ಅಥವಾ ಈ ಗಂಭೀರ, ಮೆಲುದನಿಯ, so called sophisticated, well-mannered gentleman ನ ವ್ಯಕ್ತಿತ್ವ ಇವನದ್ದೇ?  ತಾನು ಭೇಟಿ ಮಾಡಿದ್ದು ಇವನನ್ನೇ? ಇಷ್ಟು ದಿನ ಹಗಲೂ ರಾತ್ರಿ ಕನಸು ಕಂಡಿದ್ದು ಈತನ ಬಗ್ಗೆಯೇ? ಎನ್ನುವ ಹಲವಾರು  ಪ್ರಶ್ನೆಗಳಿಗೆ ಆಕೆ  ಕಂಡುಕೊಂಡ ಉತ್ತರ, ತನ್ನ ನೈಜತೆ, ಆಸಕ್ತಿಗಳನ್ನು ಕಳೆದುಕೊಂಡ ವೇದ್  ಪ್ರಪಂಚದ, ಸಮಾಜದ ಕೈಗೊಂಬೆಯಾಗಿ ಒಂದು mediocre ಬದುಕನ್ನು ಸವೆಸುತ್ತಿರುವ ವ್ಯಕ್ತಿ, ಒಂದು ನಿಮಿಷವೂ ಆಚೀಚೆಯಾಗದ mechanical routine, ಹೀಗೆ ಕೂರಬೇಕು, ಹೀಗೆ ಮಾತನಾಡಬೇಕು ಎನ್ನುವ ಚೌಕಟ್ಟಿನಲ್ಲಿ ತನ್ನನ್ನು ತಾನು ಬಂಧಿಸಿಕೊಂಡು ಕೃತಕ ಬದುಕನ್ನು ಸವೆಸುತ್ತಿದ್ದಾನೆ.

   ಹಲವಾರು ಭೇಟಿಗಳ ನಂತರ, ತನ್ನ ಅನಿಸಿಕೆಯನ್ನು ಅವನ ಮುಂದೆ ಬಿಚ್ಚಿಟ್ಟಾಗಲೂ  ಸರಿಯಾಗಿ ಪ್ರತಿಕ್ರಿಯಿಸದ ವೇದ್, ಆ ವಿಷಯವನ್ನು ತಳ್ಳಿ ಹಾಕುತ್ತಿರುತ್ತಾನೆ. ತಾರಾ ತನ್ನನ್ನು ಮದುವೆಯಾಗಲು ಸಂತೋಷದಿಂದ ಒಪ್ಪುವಳು ಎನ್ನುವ ನಂಬಿಕೆಯಿಂದ  ಆಫೀಸ್ ಕಲೀಗ್ಸ್ ಮುಂದೆ ಅವಳಲ್ಲಿ  ತನ್ನ ಪ್ರೇಮ ನಿವೇದಿಸುತ್ತಾನೆ. ಒಪ್ಪಲೂ ಆಗದ, ನಿರಾಕರಿಸಲೂ ಆಗದ ತೊಳಲಾಟದಲ್ಲಿ ತಾರಾ ಮತ್ತೊಮ್ಮೆ ತನಗನಿಸಿದ್ದನ್ನು ಹೇಳಿದಾಗ ವೇದ್  ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿರುವುದಿಲ್ಲ. ಈ ನಡುವೆ ಗೊತ್ತೋ ಗೊತ್ತಿಲ್ಲದೆಯೋ  ತಾರಾಳ ಮನಸ್ಸನ್ನು ಪದೇ ಪದೇ  ನೋಯಿಸುತ್ತಾನೆ. ಈ ನಡುವಳಿಕೆಯಿಂದ ಇಬ್ಬರೂ ದೂರವಾಗುತ್ತಾರೆ. 

   ಈ ಕ್ಷಣಕ್ಕೆ ಅವನಲ್ಲೇ ಗೊಂದಲ. ಮನಸು ಬಯಸುವಂತೆ ಬದುಕಲೇ, ಅಥವಾ ಕನಸನ್ನು ಮೂಟೆಕಟ್ಟಿ ತಿಪ್ಪೆಗೆಸೆದು ಕೃತಕ ಬಾಳು ನಡೆಸಲೇ ಅನ್ನುವ ದ್ವಂಧ್ವ. ತನ್ನ ನೈಜತೆಯನ್ನು supress ಮಾಡುವ ಭರದಲ್ಲಿ ಬದುಕನ್ನು ಇನ್ನೂ  ಗೋಜಲು ಮಾಡಿಕೊಳ್ಳುತ್ತಾನೆ. ಯಾವಾಗಲೂ ತಾನು ವಿಧೇಯತೆಯಿಂದ ನಡೆದುಕೊಳ್ಳುವ  ಬಾಸ್ ಎದುರಲ್ಲಿ ಟೈ ಕಿತ್ತೆಸೆಯುತ್ತಾನೆ. ಇಲ್ಲಿ  ಟೈ ಅವನನ್ನು ಕಟ್ಟಿ ಹಾಕಿದ ಪಾಶ, ಅದರಿಂದ ಕಳಚಿಕೊಳ್ಳಬೇಕು ಎನ್ನುವ ಅವನ ಪ್ರಯತ್ನವನ್ನು ಬಿಂಬಿಸುತ್ತದೆ.



   ಇಲ್ಲಿ ಜೀವಿಸುವ ಪ್ರತಿಯೊಬ್ಬರ ಬದುಕೂ ಕೇವಲ ತೋರಿಕೆಗೆ , ಮನಸಲ್ಲೇನಿದೆ ಎನ್ನುವ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲ, ದುಡಿಮೆ, ಹಣ, ಯಶಸ್ಸು, ಹೆಸರು ಇಷ್ಟೇ ಈ ಲೋಕದಲ್ಲಿ ಬೆಲೆಬಾಳುವಂಥವು ಎಂಬುದು ಅವನನ್ನು ಇನೂ restless ಮಾಡುತ್ತಿರುತ್ತದೆ. ಯಾರೆದುರೂ ಮನಸಿನ ಮಾತು ಹೇಳಲಾದದ ಪರಿಸ್ಥಿತಿಯಲ್ಲಿ ಕನ್ನಡಿಯಲ್ಲಿ ಕಾಣುವ ತನ್ನ ಜೊತೆಯಲ್ಲೇ ಆಗಾಗ ಸಂಭಾಷಿಸುತ್ತಾನೆ.   ಸಂಪೂರ್ಣವಾಗಿ ಮೈ ಮುಚ್ಚುವ, ಬಿಗಿಯಾದ ಉಡುಗೆಯನ್ನು ಧರಿಸುವ ವೇದ್ ಭಾವನೆಗಳನ್ನೂ ಅಷ್ಟೇ  ಭದ್ರವಾಗಿ ಬಚ್ಚಿಟ್ಟುಕೊಂಡು ಬಂದಿರುತ್ತಾನೆ. ಮಜವೆಂದರೆ ಅಪರಿಚಿತರ ಎದುರು ವೇದ್ ಗೆ ಯಾವುದೇ ಮುಜುಗರವಿಲ್ಲ , ಸರಾಗವಾಗಿ ಕವನ ರೂಪದಲ್ಲಿ ಕತೆಯನ್ನು ಹೇಳುತ್ತಾ, ಆ ಮೂಲಕ , ಆ  ಕ್ಷಣದ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತಿರುತ್ತಾನೆ.  

   ತನಗೆ ಆಸಕ್ತಿಯಿರುವ ಕಥೆ, ಕವನ, ನಾಟಕವನ್ನು ತ್ಯಾಗ ಮಾಡಿ ತಂದೆಯ ಇಷ್ಟದ ಇಂಜಿನಿಯರಿಂಗ್ ಮುಗಿಸಿ ಒಂದು ಕೆಲಸ ಗಿಟ್ಟಿಸಿಕೊಂಡ ತನ್ನ ಬಗ್ಗೆ ಜಿಗುಪ್ಸೆ ಮೂಡಿ, ಆಫೀಸಿನ  ಕೆಲಸಗಳಲ್ಲಿ ಎಡವಟ್ಟು ಮಾಡಿಕೊಳ್ಳುತ್ತಾನೆ. ಕೊನೆಗೊಂದು  ದಿನ ಬಾಸ್ ಜೊತೆಗೆ ವಿಚಿತ್ರವಾಗಿ, ಆಕ್ರಮಣಕಾರಿಯಾಗಿ  ನಡೆದುಕೊಳ್ಳುತ್ತಾನೆ, ಆ ಕಾರಣ  ಆಫೀಸಿನಿಂದ ಕಿತ್ತೊಗೆಯಲಾಗುತ್ತದೆ.

   ಹಿಲ್ ಸ್ಟೇಷನ್ ನಲ್ಲಿದ್ದ ಹುಟ್ಟೂರನ್ನು ಸೇರಿದ ವೇದ್ ಹಾಗೋ ಹೀಗೋ ಕಥೆ ಹೇಳುವ ವೃದ್ದನ ಮನೆಗೆ ಹೋಗಿ ಕತೆ ಮುಂದುವರೆಸುವಂತೆ ಪೀಡಿಸಿದಾಗ,  ಮುಪ್ಪಿನಿಂದ ನುಜ್ಜುಗುಜ್ಜಾಗಿ, ಅರಳು ಮರಳಾದ ಮುದುಕ , “ನಾನೇನು ಹೇಳೋದು ನಿನ್ನ ಕತೆ, ಅದನ್ನ ನೀನೇ ಬರ್ಕೊಬೇಕು” ಎಂದೇನೇನೋ ಬಡಬಡಿಸುತ್ತಾನೆ. ಈ ಕ್ಷಣಕ್ಕೆ ವೇದ್ ಗೆ ಏನೋ ಸಾಕ್ಷಾತ್ಕಾರವಾದ ಭಾವ !

   ಇವತ್ತಿಗೂ ತಂದೆಯನ್ನು ಕಂಡರೆ ಭಯಪಡುವ ವೇದ್, ಅಜ್ಜಿ, ತಂದೆತಾಯಿಯ ಎದುರು ತಾನೊಂದು ಕತೆ ಹೇಳುವನೆಂದೂ , ಕೇಳಬೇಕೆಂದೂ ರಿಕ್ವೆಸ್ಟ್ ಮಾಡುತ್ತಾ , ಧರಿಸಿದ ಸ್ವೆಟರನ್ನು ಬಿಚ್ಚಿ ಪಕ್ಕಕಿಡುತ್ತಾನೆ,  ಇಷ್ಟು ದಿನ ಮನಸ್ಸಿನಲ್ಲಿ ಬೆಚ್ಚಗಿಟ್ಟಿದ್ದ  ಭಾವನೆಗಳನ್ನು ಬೆತ್ತಲಾಗಿಸುತ್ತಾನೆ. ಕಥಾರೂಪದಲ್ಲಿ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ.  ಮನೆಯವರೆಲ್ಲರೂ ಮರುಕ ಪಡುತ್ತಾರೆ, ತಂದೆಗೋ ಅಪರಾಧಿ ಪ್ರಜ್ಞೆ , ಮಗನನ್ನು ಬಿಗಿದಪ್ಪಿ ಅವನಿಗಿಷ್ಟವಿರುವ ದಾರಿಯಲ್ಲೇ ಸಾಗುವಂತೆ ಹುರಿದುಂಬಿಸುತ್ತಾನೆ. ತಾರಾಳನ್ನು ಹುಡುಕಿ ಕೊಂಡು ಹೋದ ವೇದ್, ಅವಳು ಎದುರಾದಾಗ ಕೋರ್ಸಿಕೋದಲ್ಲಿ ಸಿಕ್ಕಾಗ ಧರಿಸಿದಂತ ಸಡಿಲ ಉಡುಪುಗಳಲ್ಲಿ ,ಮುಂಚಿನ ಕೂಲ್ ಚಿಲ್ದ್  ಹುಡುಗನಂತೆ ಕಾಣುತ್ತಾನೆ. ಇಬ್ಬರೂ ಮತ್ತೆ ಒಂದಾಗುತ್ತಾರೆ. ತಾರಾಳ ಸಂಗ ವೇದ್ ಗೆ  ಅವನ ಆಸಕ್ತಿ, ನೈಜತೆಯ ಬೆಲೆಯನ್ನು ತಿಳಿಸಿಕೊಟ್ಟು , ತಂದೆಯ ಎದುರಲ್ಲಿ  ಎದೆ ಸೆಟೆದು ಕುಳಿತು ತನ್ನ ಮನಸ್ಸಿನ  ಮಾತನ್ನು ಹಂಚಿಕೊಳ್ಳಲು, ಕಂಡ ಕನಸಿನ  ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ.

   ಕೊನೆಗೂ ಹೇಳಲು ಎಲ್ಲರ ಬಳಿಯೂ ಕತೆಗಳಿವೆ, ಅದನ್ನು ಕಟ್ಟಲು ಸರಿಯಾದ ಪದಗಳು ಬೇಕು ಅಷ್ಟೇ.. ತನ್ನ ಮನಸಿನಲ್ಲಿ ಹುಟ್ಟಿದ ಕತೆಯನ್ನು ಕೇಳುಗನ ಮನಸಿನಾಳಕ್ಕೆ, ಕೊನೆಯಲ್ಲಿ ಸ್ವತಃ ಕುಟುಂಬದವರ ಮನಸಿನಾಳಕ್ಕೆ  ಇಳಿಯುವಂತೆ ಪ್ರಸ್ತುತಪಡಿಸುವ ವೇದ್ ನ ಕೌಶಲ್ಯ,  ಈ ನಂತರದಲ್ಲಿ ತನ್ನ ಕನಸಿನ ಬದುಕು ಬದುಕಲು ಸಹಾಯ ಮಾಡುತ್ತದೆ.

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ