ಪರಿ ಮತ್ತು ಗೌನು
ಆಗ ಮಾರ್ಚ್ ತಿಂಗಳು, ನೆಂಟರ ಮನೆಯ ಮಗುವಿನ ಹುಟ್ಟುಹಬ್ಬಕ್ಕೆ ಗಿಫ್ಟ್ ತರಲೆಂದು ಬಿಗ್ ಬಝಾರ್ ಗೆ ಹೋಗಿದ್ದೆವು. ಅಲ್ಲಿನ ಕಿಡ್ಸ್ ಸೆಕ್ಷನ್ ಅಲ್ಲಿ ಓಡಾಡುತ್ತಿದ್ದಾಗ ಪರಿ ನನ್ನ ಕೈ ಹಿಡಿದು ಅವಳೊಟ್ಟಿಗೆ ಎಳೆದೊಯ್ದಳು."ಅಮ್ಮಾ ಇಲ್ನೋಡು,ಮಕ್ಕಳ ನೈಟ್ ಡ್ರೆಸ್ಸ್ ಎಷ್ಟು ಚಂದ ಇದೆ, ನಂಗೂ ಒಂದು ಕೊಡಿಸು "ಅಂದ್ಲು. ಆ ಗೌನ್ ತಿಳಿ ಗುಲಾಬಿ ಬಣ್ಣದ, ಅತ್ತ ಪೂರ್ತಿ ಉದ್ದವೂ ಅಲ್ಲ, ಇತ್ತ ಫ್ರಾಕೂ ಅಲ್ಲದ ತ್ರೀ ಫೋರ್ತ್ ಅಳತೆಯ, ಪಾದ್ರಿಗಳು ಹಾಕುವಂತಹ ನಿಲುವಂಗಿಯನ್ನು ಹೋಲುತ್ತಿತ್ತು. ಪ್ಲೈನ್ ಗೌನ್ ಮೇಲೆ ನಡುವಿನಲ್ಲೊಂದು ಪ್ರಿನ್ಸೆಸ್ ಕಾರ್ಟೂನ್ ಚಿತ್ರ ಬಿಟ್ಟರೆ ಆ ಡ್ರೆಸ್ಸಲ್ಲಿ ಹೇಳುವಂತದ್ದೇನೂ ಇರಲ್ಲಿಲ್ಲ. ಬೆಲೆ ನೋಡಿದರೆ ಬರೋಬ್ಬರಿ 449 ರೂಪಾಯಿಗಳು. ಯಾಕೋ ಆ ಬೆಲೆಗೆ ಆ ಬಟ್ಟೆ ದುಬಾರಿ ಅನ್ನಿಸ್ತು. ಹೇಗಾದರೂ ಸಮಾಧಾನ ಮಾಡುವಾ ಅನ್ಕೊಂಡು.” ನೋಡು ಅದು ಸೈಜ್ ದೊಡ್ಡದಿದೆ, ನಿನಗೆ ಬರೊಲ್ಲ” ಅಂದೆ. ಅಲ್ಲಿಯೇಇರೋ ಸೇಲ್ಸ್ ಗರ್ಲ್ ಕೂಡ ಇದೊಂದು ಪೀಸ್ ಮಾತ್ರ ಮಿಕ್ಕಿರೋದು ಅಂದ್ರು.
“ಪರ್ವಾಗಿಲ್ಲ ಕೊಡ್ಸಿಬಿಡಮ್ಮಾ, ಮುಂದಿನ
ವರ್ಷ ತಂಕಾನೂ ಹಾಕ್ಕೋ ಬಹುದು, ಹೇಗೂ ಅಪ್ಪ ಸೈಕಲ್ ಕೊಡಿಸ್ತೀನಿ ಅಂದಿದಾರೆ, ಆಗ ನಾನು ಉದ್ದ
ಆಗ್ತಿನಿ , ಅಷ್ಟ್ರಲ್ಲಿ ಈ ಡ್ರೆಸ್ಸೂ ಫಿಟ್
ಆಗತ್ತೆ" ಅಂದ್ಲು. "ಅದೇ.. ಇಲ್ಲಿ ದುಡ್ಡು ಉಳಿಸಿದ್ರೆ ಸೈಕಲ್ ಗೆ ಆಗತ್ತೆ ಅಲ್ವಾ,
ಅದಕ್ಕೇ ಈಗ ಬೇಡ ಬಾ
" ಅಂತ ಸಮಾಧಾನ ಮಾಡಿದೆ. "ಹೂಂ.. ಅಮ್ಮಾ
ಡೈರಿ ಬರ್ಸಿದಾರೆ , ಬರೋವರ್ಷದ್ದು ಬುಕ್ಸ್ ಹಣ ಈ ತಿಂಗಳೇ
ಕಟ್ಬೇಕಂತೆ, 18000 ರುಪೀಸು, ಬಾ ಬಿಡು ಹೋಗೋಣ " ಅಂದ್ಲು.
ಬರೀ 1000 ವರೆಗೆ ಎಣಿಕೆಗೊತ್ತಿದ್ದ ಹುಡುಗಿಗೆ 1800 ಅನ್ನೊ ನಂಬರ್ 18,000 ರಂತೆ ಕಂಡಿತ್ತು." ., ಅವರಪ್ಪ ಇನ್ನೇನು ತನ್ನ ಸರತಿ ಬಂತು ಅಂತ ಬಿಲ್ಲಿಂಗ್
ಗೆ ಸಾಮಾನೆಲ್ಲ ಪೇರಿಸುವಷ್ಟರಲ್ಲಿ ಈ
ಪರಿ ಬಿಕ್ಕಳಿಸಲು ಶುರು ಮಾಡಿದ್ಲು.” ಅಮ್ಮಾ, ಓಡಿ ಹೋಗಿ ತಕ್ಕೊಂಡು ಬರ್ಲಾ " ಅಂದಾಗ,"ಈಗಷ್ಟೇ ಬೇಡ ಅಂತ ಒಪ್ಪಿಕೊಂಡಿಯಲ್ವೇ
" ಅಂತ
ಸ್ವಲ್ಪ ಜೋರಾಗೇ ಗದರಿಸಿದೆ. ಕಣ್ಣಲ್ಲಿ ನೀರು ತುಂಬಿಕೊಂಡು, ಮುಂಚೇ ಉಬ್ಬಿರೋ ಕೆನ್ನೆಗಳನ್ನು ಇನ್ನೊಂದಿಷ್ಟು ಉಬ್ಬಿಸಿ " ನಾನೇನೋ ಬೇಡಾ ಅಂದೆ , ನೀನು ಇರಲಿ ಪಾಪ ಪರೀದು ಅಂತ ಒತ್ತಾಯ ಮಾಡಿ ಕೊಡಿಸೋದಲ್ವಾ" ಅಂದಾಗ ಆ ಸಿಟ್ಟಲ್ಲೂ ನನಗೆ
ನಗು ಬಂದಿದ್ದು ಸುಳ್ಳಲ್ಲ.
"ಇಲ್ಲಿಂದ ಬಿಗ್ ಬಝಾರ್ ಎಷ್ಟು ದೂರ ಆಗತ್ತೆ?" ಇಲ್ಲಂತೂ
ಆ ಡ್ರೆಸ್ಸ್ ಸಿಕ್ಕಿಲ್ಲ ಈಗ ಬಿಗ್ ಬಝಾರ್
ಗೇ ಹೋಗೋಣ ನಡಿ ಅನ್ನೋದನ್ನ ಇಂಡೈರೆಕ್ಟ್ ಆಗಿ ಹೇಳಿದ್ಲು. ಪಕ್ಕದ ಮಳಿಗೆಯಲ್ಲಿ ಕಾರ್ಟೂನ್ ಚಿತ್ರಗಳಿರೋ ಸ್ಲಿಪ್ಪರ್ ಗಳಿದ್ದವು. " ನೋಡು
ಎಷ್ಟು ಕಲರ್ಫುಲ್ ಚಪ್ಪಲಿಗಳಿವೆ,
ನಿಂಗೆ ಇದನ್ನ ತಗೋಳೋಣ್ವಾ? " ಅಂತ ಕೊಡಿಸದೇ ಇರೋ ಗೌನ್ ಮೇಲೆ ಎಕ್ಸ್ಚೇಂಜ್ ಆಫರ್ ಕೊಟ್ಟೆ. " ಹೂಂ!!, ಹೊಸಾ ನೈಟಿ ಗೆ ಸೂಟ್ ಆಗತ್ತೆ
!!” ಅಂದಾಗ ಅಂತೂ ಅಮ್ಮ ಆ ನೈಟಿ ಕೊಡ್ಸೇ
ಕೊಡಿಸ್ತಾರೆ ಅನ್ನೋ ಅವಳ ನಂಬಿಕೆ ಮುಂದೆ ನಾನು ಕೊಟ್ಟ ಆಫರ್
ನನ್ನನ್ನೇ ನಾಚಿಸ್ತು . "ನೈಟ್ ಗೌನ್ ಜೊತೆ ಚಪ್ಪಲಿ ಹಾಕ್ಕೊಂಡು ಮಲ್ಕೊತಾರಾ? " ಅಂತ ಮಾತು ಬದಲಾಯಿಸಿ ಮನೆಗೆ ವಾಪಸ್ ಬಂದಿದ್ದಾಯ್ತು.
ಈಗೊಂದು
ಎರಡು ದಿನಗಳಿಂದ ಸಿಕ್ಕಾಪಟ್ಟೆ ಗಾಳಿ, ಚಳಿಯೂ ಉಂಟು. ಗೌನ್ ಜೊತೆಗೆ ಪ್ರಿನ್ಸೆಸ್ ಕೂಡ ಕಪಾಟಿಂದ ಹೊರಬಂದು ನಮ್ಮ ಪರಿ ಮೈಮೇಲೆ ಏರಿವೆ. " ಅಮ್ಮಾ, ಬಿಗ್ ಬಝಾರ್ ಹೋಗುವಾ, ಈ ಸಲ ಡೋರೇಮೋನ್,
ಆಂಗ್ರೀ ಬರ್ಡ್ಸ್ ಗೌನ್ ಬಂದಿರಬಹುದು, ತಕ್ಕೊಳ್ಳೋದು ಬೇಡಾ, ಸುಮ್ನೇ ನೋಡಿ ಬರುವಾ " ಅಂತಿದ್ದಾಳೆ.
:-):-)
(ಜೂನ್ 2013 ರಲ್ಲಿ ಬರೆದದ್ದು)