ಸಂಕ್ರಾಂತಿ ಹಬ್ಬ

 

ರಿನಿಂದ ಬಂದ ನೆಂಟರನ್ನು ಶಾಪಿಂಗ್ ಗೆಂದು ಗಾಂಧಿಬಝಾರಿಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಪ್ರತಿಷ್ಠಿತ ಇಮಿಟೇಟೆಡ್ ಜ್ಯುವೆಲರಿ ಅಂಗಡಿಯನ್ನು ಹೊಕ್ಕೆವು. ನಾನಾ ರೀತಿಯ ಸರ, ಬಳೆ ನೆಕ್ಲೇಸು,ತೋಳಬಂಧಿಗಳು, ಆಕರ್ಷಕ ಜಡೆಬಿಲ್ಲೆಗಳನ್ನೆಲ್ಲ ನೋಡಿದೆವು. ಬಂಗಾರವನ್ನೂ ನಾಚಿಸುವಂತಹ ಕುಸುರಿ ,ವಿನ್ಯಾಸಗಳಿದ್ದ ಆಭರಣಗಳಿದ್ದವು.

    ನನಗೆ ನೆನಪಿದ್ದಂತೆ ಎಸ್.ಎಸ್.ಎಲ್.ಸಿ ಪಾಸಾಗುವವರೆಗೊ ನಾವೆಂದೂ ಬಂಗಾರದ ಆಭರಣಗಳನ್ನು ಧರಿಸಿದ್ದಿಲ್ಲ, ಕಾಲದಲ್ಲಿ ಬಹಳಷ್ಟು ಜನರ ಆರ್ಥಿಕ ಪರಿಸ್ಥಿತಿ ಒಂದೇ ತರಹದ್ದು, ನಾವಷ್ಟೇ ಅಲ್ಲ, ಶಾಲೆಗೆ ಬರುವ ಬಹಳಷ್ಟು  ಹುಡುಗಿಯರು ನಮ್ಮಂತೇ ಉಮಾಗೋಲ್ಡ್,ರೋಲ್ಡ್ ಗೋಲ್ಡ್ , ರೆಡಿಮೇಡ್ ರಿಂಗುಗಳನ್ನು ಧರಿಸುತ್ತಿದ್ದರು.  ಈಗೆಲ್ಲಾ ಚಿನ್ನದ ಆಭರಣಗಳೂ ರೆಡಿಮೇಡ್ ದೊರೆಯುತ್ತವೆ, ಆಗೆಲ್ಲ ಚಿನ್ನವನ್ನು ಬರೀ ಅಕ್ಕಸಾಲಿಗರ ಅಂಗಡಿಗೆ ಹೋಗಿ ಮಾಡಿಸುತ್ತಿದ್ದುದರಿಂದ ರೆಡಿಮೇಡ್ ಅಂದರೆ ನಕಲಿ ಅನ್ನೋ ಅರ್ಥ ಕೊಡುತ್ತಿತ್ತು.


   ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬಕ್ಕೆ ಮಾತ್ರ ನನ್ನ ಅಕ್ಕ ಮತ್ತು ನನಗೆ ಬಂಗಾರ ಧರಿಸುವ ಅವಕಾಶ ಸಿಗ್ತಿತ್ತು. ನಮ್ಮ ಅಜ್ಜಿಯ ಹತ್ತಿರ ಅವರ ಅತ್ತೆ ಅಂದರೆ ನಮ್ಮ ಮುತ್ತಜ್ಜಿ  ಕೊಟ್ಟ ಒಂದು ಚಿನ್ನದ  ಜಡೆಬಿಲ್ಲೆಯಿತ್ತು. ಉರುಟಾದ ಜಡೆಬಿಲ್ಲೆಯ ಮೇಲೆ ಜೋಡಿ ನಾಗರಗಳ  ಕುಸುರಿಯಿತ್ತು, ನಾಗರದ ಸುತ್ತಲೂ ಅರ್ಧ ವೃತ್ತಾಕಾರದಲ್ಲಿ ಎರಡು ಸುತ್ತು ಸಣ್ಣ ಗುಂಡುಗಳಿದ್ದವು ಅಮ್ಮನ ಹತ್ತಿರ ಒಂದು ಜೊತೆ  ಹಸಿರು ಕಲ್ಲುಗಳನ್ನು  ಪೋಣಿಸಿದ ಲೋಲಾಕಿತ್ತು. ಒಂದು ಸಂಕ್ರಾಂತಿಗೆ ಜಡೆಬಿಲ್ಲೆ ಅಕ್ಕ ಧರಿಸಿದರೆ ಲೋಲಾಕು ನನಗೆ, ಬರೋ ಸಂಕ್ರಾಂತಿಗೆ ವೈಸ್ ವರ್ಸಾಹಬ್ಬದ ದಿನ ಹೊಸ ಬಟ್ಟೆ ಧರಿಸಿ ನಾನು ಅಕ್ಕ ಹಾಗೂ  ನಮ್ಮ 6-7 ಜನ ಗೆಳತಿಯರು ಸೇರಿ ಮನೆಮನೆಗೆ ಎಳ್ಳು  ಬೀರಲು ಹೋಗುತ್ತಿದ್ದೆವು.ಸಂಜೆ 4-5 ಗಂಟೆಗೆ ಎಳ್ಳು ಬೀರೋಕ್ಕೆ ಹೋಗೋದಾದರೆ ನಮಗೆ ಮಧ್ಯಾಹ್ನ ಊಟದ ನಂತರದಿಂದಲೇ ಸಂಭ್ರಮ ಶುರುವಾಗ್ತಿತ್ತು.

   ಆ ಸಲ ಜಡೆಬಿಲ್ಲೆ ಅಕ್ಕನಿಗೆ ಮತ್ತು ನನಗೆ ಲೋಲಾಕು ಧರಿಸೋ ಚಾನ್ಸ್ ಸಿಕ್ಕಿತ್ತು.  ಮುಖ ತೊಳೆದು, ರೆಮೀ ಸ್ನೋ, ಪಾಂಡ್ಸ್ ಪೌಡರ್ ಹಚ್ಚಿಕೊಂಡು, ಲಾಲಗಂಧವೋ, ಬಿಂದಿಯನ್ನೋ ಇಟ್ಕೊಂಡು ,ಮುಂಚಿನ ದಿನದಿಂದಲೇ ಸಾಕಷ್ಟು ಬಾರಿ ನೋಡೀ ನೋಡೀ ತೆಗೆದಿಟ್ಟ ಹೊಸಬಟ್ಟೆಯನ್ನು ಹಾಕಿಕೊಳ್ತಿದ್ವಿ.ನಮ್ಮಜ್ಜಿ  ಕೂದಲನ್ನು ಬಾಚಿ ಚೌಲಿ ಜೊತೆ ಹೆಣೆಯುತ್ತಿದ್ದರು. ಮನೆಯಲ್ಲೇ ಅರಳುತ್ತಿದ್ದ ಕಾಕಡಾ, ಮಧ್ಯಾಹ್ನ ಮಲ್ಲಿಗೆ ಹೂವನ್ನು ಅಚ್ಚಹಸಿರು ಎಲೆಗಳೊಂದಿಗೆ ಪೋಣಿಸಿ ಅಜ್ಜಿ ಮಾಲೆ ಹೆಣೀತಿದ್ರು. ಅದನ್ನು ಚೌಲಿಜಡೆಗೆ ಸುರುಳಿಯಾಗಿ ಸುತ್ತಿ ಕೊನೆಗೊಂದು ಕುಚ್ಚನ್ನೋ, ವೆಲ್ವೇಟ್ ಗೊಂಡೆಯನ್ನೋ ಸೇರಿಸಿ ಕಟ್ಟಿ ಬಿಟ್ಟರೆ ಅಲಂಕಾರ ಮುಗೀತಿತ್ತು. ಕೇರಿಯ ಎಲ್ಲಾ ಮನೆಗಳಿಗೆ ಎಳ್ಳು ಬೀರಿ ವಾಪಾಸು ಬರುವವರೆಗೂ ಕತ್ತು ಅಲ್ಲಾಡಿಸುತ್ತಿರಲಿಲ್ಲ.

Google Image



    ರಾಖಿ ಹಬ್ಬದಂದು ಕೈ ತುಂಬಾ ಬಣ್ಣ ಬಣ್ಣದ ರಾಖಿಗಳನ್ನು ಕಟ್ಟಿಕೊಳ್ಳುತ್ತಿದ್ದ ತಮ್ಮಂದಿರಿಗೆ " ಹುಶಾರಪ್ಪೋ, ರಸ್ತೆ ಮಧ್ಯ ದನ ಗಿನ ಬಾಯಿ ಹಾಕ್ಯಾವು" ಅಂತ ಅಣಕಿಸಿದ್ದನ್ನು ನೆನಪಿಟ್ಟುಕೊಂಡ ತಮ್ಮಂದಿರು ದಿನ " ಹುಶಾರು ಕಣ್ರೇ, 5 ಗಂಟೆ ಆಯ್ತು,ಎಮ್ಮೆ ಹಸು ಮನೆಗ್ ವಾಪಸ್ ಬರೋ ಹೊತ್ತು, ನಿಮ್ಮ ಜಡೆಗಳನ್ನ ಕಾಪಾಡ್ಕೊಳ್ಳಿ" ಅಂತ ಹೇಳಿ ನಿರಾಳರಾಗ್ತಿದ್ರು.

    ಕೈಲಿ ಒಂದು ಪಂಚಬಟ್ಟಲು, ಅದರಲ್ಲಿ ಎಳ್ಳು ಬೆಲ್ಲ, ಕುಸುರೆಳ್ಳು, ಪಂಚಕಜ್ಜಾಯ, ಅರಿಶಿನ ಕುಂಕುಮ, ಒಂದಿಷ್ಟು ಹೂ ಹೂವುಗಳು. ಇವಷ್ಟನ್ನೂ ತುಂಬಿಕೊಂಡು, ಅಮ್ಮ ಕೊಟ್ಟಿರೋ ಚಮಚದಲ್ಲಿ  ಎಷ್ಟು ಸ್ಪೂನು ಪಂಚಕಜ್ಜಾಯ, ಎಳ್ಳು ಕೊಡಬೇಕೆಂಬುದನ್ನು ಸರೀ ಮನದಟ್ಟು ಮಾಡಿಕೊಂಡು ಸವಾರಿ ಹೊರಡುತ್ತಿತ್ತು. ಅವಾಗಾವಾಗ ನಡುದಾರಿಯಲ್ಲಿ ನಮ್ಮ ನಮ್ಮ  ಆಭರಣಗಳು ಸೇಫ್ ಆಗಿವೆಯೇ ಅಂತ ಕನ್ಫರ್ಮ್ ಮಾಡಿಕೊಳ್ತಿದ್ವಿ.

   ಎಲ್ಲಾ  ಮನೆಗೆ ಎಳ್ಳು ಬೆಲ್ಲ ಕೊಟ್ಟು ಮನೆ ಸೇರಬೇಕಾದರೆ ಹೂವಿನ ಜೊತೆ ಮುಖಗಳೂ ಬಾಡಿರುತ್ತಿದ್ದವು.ಅಂತೂ ಮನೆ ಹೊಕ್ಕಾಯ್ತು, ತಯಾರಾಗುವಾಗ ಇರುತ್ತಿದ್ದ ಸಂಭ್ರಮ, ಜಾಗರೂಕತೆ ಅವನ್ನು ಬಿಚ್ಚಿಡುವಾಗ ಇರುತ್ತಿರಲಿಲ್ಲ. ಅಕ್ಕ ಎನೋ ಅಜ್ಜಿ ಕೈಲಿ ಜಡೆ  ಬಿಚ್ಚಿಸಿಕೊಂದು ಜಡೆ ಬಿಲ್ಲೆಯನ್ನು ಹಿಂತಿರುಗಿಸಿದಳು.ನಾನು ರಾಗ ಶುರು ಹಚ್ಚಿಕೊಂಡೆ, ಅಮ್ಮಾ , ಓಲೆ ಬಿಚ್ಚು, ಹಾಳಾದ್ದು, ಚುಚ್ತಾ ಇದೆ, ಇನ್ನೊಮ್ಮೆ ಹಾಕ್ಕೊಳಲ್ಲಾ ಇದನ್ನ, ಯಾರಿಗ್ ಬೇಕಿದು ?" ಅಲ್ಲೇ ಕೂತ ಅಪ್ಪ "ಇರು, ಈಗ ಟೀವೀಲಿ  ಶಬರಿಮಲೆ ಜ್ಯೋತಿ ತೋರಿಸ್ತಾರೆ,  ಆಮೇಲೆ ಅಮ್ಮಾ ಕಿವೀದು ತೆಗೀತಾರೆ, ಅಲ್ಲಿವರೆಗೂ ಸುಮ್ಮನೆ ಕೂತ್ಕೋ, ಟೀವಿ ನೋಡು " ಅಂದ್ರು. ನಾ ಬಿಡಬೇಕಲ್ಲ, ಒಳ್ಳೆ ಗುಂಯ್ಯಿ ಹುಳದ ತರಹ ಮತ್ತೆ ಅದೇ ಕ್ಯಾಸೆಟ್ ಪ್ಲೇ ಮಾಡಿದೆ, ಇನ್ನೂ ಜಾಸ್ತಿ ಕಿರಿಕಿರಿ ಆಗೋ ಧಾಟಿಯಲ್ಲಿ..

   ಅಲ್ಲಿ ಶಬರಿಮಲೆ ಜ್ಯೋತಿ ಕಂಡು ಕೈ ಮುಗಿದಾಯ್ತು, ಅಮ್ಮ ಇನ್ನೇನು ನನ್ನ ಹತ್ತಿರ ಬರ್ತಾ ಇದಾರೆ ಅನ್ನುವಷ್ಟರಲ್ಲಿ  ನಾನು ಅರ್ಧ ತಿರುಗಣಿ ತಿರುವಿ ಆಗಿತ್ತು, ನನ್ನ ಗ್ರಹಚಾರಕ್ಕೆ ಅದೇ  ಸಮಯಕ್ಕೆ ಕರೆಂಟು  ಹೋಗಿಬಿಡ್ತು, ನಾ  ಕೈ ಬಿಟ್ಟು ಬಿಟ್ಟೆ, ತಿರುಗಣಿ , ಲೋಲಾಕು ಎರಡೂ ಎಲ್ಲೋ ಹೋಗಿಬಿಟ್ಟವು. ಅಳು ಮೋರೆ ಮಾಡಿಕೊಂಡು " ಎಲ್ಲೋ ಬಿದ್ ಹೋಯ್ತು" ಅಂದೆ, ಕತ್ತಲಲ್ಲಿ ಅಳುಮೋರೆ  ಯಾರಿಗೆ ತಾನೇ ಕಾಣ್ಬೇಕು, ಅಮ್ಮ ಒಳಗೆ ಹೋಗಿ ಸೀಮೇ ಎಣ್ಣೆ ಬುಡ್ಡಿ ಹಚ್ಚಿಕೊಂಡು ಬಂದ್ರು, ಲೋಲಾಕು ಸ್ವಲ್ಪ ದೊಡ್ಡದಿತ್ತು ಅದಕ್ಕೆ ಸಿಕ್ತು, ತಿರುಗಣಿ ಕಾಣಲೇ ಇಲ್ಲ, ಅಷ್ಟರಲ್ಲಿ ಕರೆಂಟ್ ಬಂತು. ತಿರುಪಣಿ ಬಿದ್ದಿದ್ದು ಮನೇಲೇ, ಸಿಕ್ಕೇ ಸಿಗತ್ತೆ, ಆದರೆ ನಾ ಮಾಡಿದ್ದ ಕಿರಿಕಿರಿ ,ಅಧಿಕಪ್ರಸಂಗತನಕ್ಕೆ ಅಪ್ಪನಿಗೆ ಸಿಟ್ಟು ಬಂತೇನೋ.

    ಮರುದಿನ ತಿಂಡಿ ಪ್ಯಾಕ್ ಮಾಡಬೇಕಾದ ಹೊತ್ತಲ್ಲಿ ಮುಂಚಿನ ದಿನದ ಟಿಫಿನ್ ಬಾಕ್ಸ್ ತೊಳೆಯಲು ಹಾಕಿದ್ದಕ್ಕೆ, ತಿರ್ಗಾಮುರ್ಗಾ ತೋಳುಗಳನ್ನು ಸರಿಪಡಿಸದೇ ಯೂನಿಫಾರ್ಮ್ ತೊಳೆಯಲು ಹಾಕಿದ್ದಕ್ಕೆ , ಇಂತಹ ಸುಮಾರು ಕಾರಣಗಳಿಗೆ ಅಮ್ಮನ ಹತ್ತಿರ ಆಗಾಗ ಬೈಸಿಕೊಂಡು, ಸಣ್ಣ ಏಟುಗಳನ್ನೂ ತಿಂದು ಅಭ್ಯಾಸವಾದ ನಮಗೆ ಅಪ್ಪನ  ಬರೀ ಗದರಿಕೆ ಅಳು ಬರಿಸುತ್ತಿತ್ತು . ಯಾಕೋ ಅಮ್ಮನ ಹತ್ತು ಹೊಡೆತಗಳೂ ಅಪ್ಪನ ಒಂದು ಗದರಿಕೆಯ ಮುಂದೆ ಏನೂ ಅನ್ನಿಸುತ್ತಿರಲಿಲ್ಲ, ಅಂತಹದರಲ್ಲಿ ಅಪ್ಪನಿಗೆ  ಆವತ್ತು ಅದ್ಯಾವ ಪರಿ ಸಿಟ್ಟು  ಬಂದಿತ್ತೋ,  ಎಲ್ಲರೂ ತಿರುಗಣಿ ಹುಡುಕುತ್ತಿದ್ದರೆ ಅಪ್ಪ ನನ್ನ ಹತ್ತಿರ ಬಂದು ಬೆನ್ನ ಮೇಲೆ ಒಂದು ಢುಮ್ಕಿ ಕೊಟ್ಟರು, ನನ್ನ ಫ್ರಾಕಿನ ಫ್ರಿಲ್ ಒಳಗೆ ಸೇರಿಕೊಂಡಿದ್ದ  ತಿರುಗಣಿ ಠಣ್ ಎಂದು ಕೆಳಗೆ ಬಿತ್ತು. ಅಂತೂ ತಿರುಗಣಿ ಸಿಕ್ಕಿತು . ಈಗ ನನ್ನ ಬಾರಿಯಾಗಿತ್ತು , ಬೆಂಚಿನ ಮೂಲೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದೆ, ಅಕ್ಕ, ತಂಗಿಯರು, ತಮ್ಮಂದಿರು ಎಲ್ಲರೂ ನನ್ನ ಸುತ್ತ ಬಂದು ಹ್ಯಾಪು ಮೋರೆ ಹಾಕಿ ನಿಂತರು. ಬಾಕಿ ಸಮಯದಲ್ಲಿ ಒಬ್ಬರೊಬ್ಬರ ಕಾಲೆಳೆದು  ಸಂತೋಷ ಪಡುತ್ತಿದ್ದ ನಾವುಗಳು ಇಂಥ ಸಮಯದಲ್ಲಿ ಎಲ್ಲರೂ ದುಃಖದಲ್ಲಿ ಪಾಲುಗಾರರಾಗುತ್ತಿದ್ದೆವು.

   ಅಷ್ಟೇ ಅಲ್ಲ, ಚಿಕ್ಕಪ್ಪನ ದುಬೈ ಫ್ರೆಂಡ್ ಮುನ್ನಾ  ಫಾರಿನ್ ನಿಂದ ತಂದ ಚಾಕೊಲೇಟುಗಳನ್ನು ತಂದು  ತಮ್ಮಂದಿರಿಗೆಂದು ಕೊಡುತ್ತಿದ್ದರು, ತಮ್ಮಂದಿರು ಮನೆಗೆ ಚಾಕಲೇಟನ್ನು ತಂದು 7-8 ತುಂಡು ಮಾಡಬೇಕಾದರೆ, ದೊಡ್ಡದು ಚಿಕ್ಕದು ಅಂತ ಹಾಥಾಪಾಯಿ  ನಡೆಯುತ್ತಿತ್ತೇ ಹೊರತಾಗಿ ಚಾಕಲೇಟನ್ನು ತಾವೊಬ್ಬರೇ ತಿಂದರೆ  ಯಾರಿಗೂ  ಗೊತ್ತಾಗೋದಿಲ್ಲ, ಅನ್ನುವ ವಿಚಾರ ತಮ್ಮಂದಿರ ಮನಸ್ಸಿನಲ್ಲಿ  ಎಂದೂ ಸುಳಿಯುತ್ತಿರಲಿಲ್ಲ . ಸಮಯದಲ್ಲಿ ಇದು ಅರ್ಥವಾಗದಿದ್ದರೂ  ಈಗ ಅದನ್ನು ನೆನೆಸಿಕೊಂಡರೆ ಖುಶಿಯಾಗುತ್ತದೆ.

   ಅಪರೂಪಕ್ಕೆ ಆದರೂ ಸೈ, ಮಕ್ಕಳ ಮೇಲೆ ಕೋಪಿಸಿಕೊಂಡಾಗ ಅಪ್ಪ ಏನಾದರೂ ಕೊಡಿಸುತ್ತಿದ್ದರು, ಅಷ್ಟಲ್ಲದೇ  ಹೋಟೆಲ್ ನಿಂದ ತಿಂಡಿಯನ್ನೂ ಕಟ್ಟಿಸಿಕೊಂಡು ಬರುತ್ತಿದ್ದರು. ಅಮ್ಮ " ಏನಿವತ್ತು , ಮಂಗಳೂರು ಬನ್ಸ್ ತಂದಿದೀರ?" ಅಂದಾಗ  " ಏನಿಲ್ಲ ಕಣೇ, ಫ್ರೆಂಡ್ಸ್ ಜೊತೆ ಕಾಫಿಗೆ ಹೋಗಿದ್ದೆ, ಮಾಣಿ ಪ್ಲೇಟ್ ಇಟ್ಟ ತಕ್ಷಣ ಪ್ಲೇಟಲ್ಲಿ ಮಕ್ಕಳ ಮುಖ ಕಂಡವು " ಅನ್ನೋರು. ಸಲ  ಢುಮ್ಕಿ ತಿಂದಿದ್ದಕ್ಕೆ ಸಮಾಧಾನಕರ ಬಹುಮಾನವಾಗಿ  ನನಗೆ ಅಪ್ಪ ಒಂದು ಗೋಲಿಬೋರ್ಡು ತಂದು ಕೊಟ್ರು, ಜೊತೆಗೊಂದು  ಬಣ್ಣ ಬಣ್ಣದ ಲಾಲಗಂಧವಿರುವ ಶಿಂಗಾರ್ ಡಬ್ಬವನ್ನೂ ಕೊಟ್ರು." ನೋಡ್ರಪ್ಪಾ, ನಾ ಪೆಟ್ಟು ತಿಂದಿದ್ದಕ್ಕೆ ನಿಮಗೆಲ್ಲಾನೂ ತಿಂಡಿ ಸಿಕ್ತು" ಅಂದಿದ್ದಕ್ಕೆ  ಅಲ್ಲೇ ನಿಂತಿದ್ದ  ಅಮ್ಮ  ತಲೆ ಮೇಲೊಂದು ಮೊಟಕಿದ್ದರು .

   ಏನು ಬರಿಯೋಕ್ಕೆ ಹೋಧರೂ ಬರೀ ಫ್ಲಾಶ್ ಬ್ಯಾಕ್ ಬರಿಯೋದೇ ಆಗೋಯ್ತು  ಅಂತ ಎಷ್ಟೊಂದು ಸಲ ಅನಿಸಿದ್ದಿದೆ,ಆದರೆಮಿತ್ರರೊಬ್ಬರು  ಅಂದಂತೆ "Life mein Nostalgia nahi toh kya jiyaa " :))))


( ಮಾರ್ಚ್ 2013 ರಲ್ಲಿಬರೆದದ್ದು )



Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ