ನೆನಪಿನ ರೈಲು
ಸಾಗರಕ್ಕೆ
ರೈಲು ಸಂಚಾರ ಪುನಃ ಆರಂಭಗೊಳ್ಳಲಿದೆ. ಎಂತಹ ಸಂತೋಷದ ಸುದ್ದಿ..ಹೇಳಿ ಕೇಳಿ ಸಾಗರ ನನ್ನೂರು, ನನ್ನ ತವರೂರು.ಖುಷಿಪಡಲು ಸಾಕಲ್ಲವೇ ಇಂತಹದೊಂದು ಸಿಹಿ
ಸಮಾಚಾರ.
ನಿಲ್ದಾಣದ ಎದುರಿದ್ದ ತ್ರಿಕೋನಾಕಾರದ ಉದ್ಯಾನ ಎಲ್ಲರ ಗಮನ ಸೆಳೆಯುತ್ತಿತ್ತು.ಅಲ್ಲಿ ಬೆಳೆದಿರುವ ಬಣ್ಣ ಬಣ್ಣ ದ ಗುಲಾಬಿ, ಗ್ಲ್ಯಾಡಿಯೋಲಸ್, ದಾಸವಾಳಗಳು ಆಕರ್ಷಕವಾಗಿದ್ದವು. ಸುತ್ತಲೂ ಮುಳ್ಳಿನ ಬೇಲಿಯನ್ನು ಹಾಕಿದ್ದರು. ಖಾಕಿ ಬಣ್ಣದ ಅಂಗಿ ಮತ್ತು ದೊಗಲವಾದ ಚಡ್ಡಿ ದರಿಸಿ, ತಲೆಗೆ ಕೆಂಪು ಬಣ್ಣದ ಮುಂಡಾಸು ಸುತ್ತಿರುವ ಮಾಲಿ ನಮಗೆ ಭಯೋತ್ಪಾದಕನಾಗಿದ್ದ.ಮನಸ್ಸು ತಡೀಲಾರದೇ ಹೂವು ಕೀಳಲು ಹೋದಾಗ ಆ ಮಾಲಿಯ ಮುಖದ ಕಲ್ಪನೆಯೇ ಬೆಚ್ಚಿ ಬೀಳಿಸುತ್ತಿತ್ತು.
ಆಟದ ಪೀರಿಯಡ್ ನಲ್ಲಿ ಮೈದಾನದ ಅಕ್ಕ ಪಕ್ಕವಿರುವ ಮನೆಯ ಜಗಲಿಯ ಮೇಲೆ ಕಂಬದಾಟ (ಉಪ್ಪು ಬೇಕಾ ಉಪ್ಪು), ಚೀಟಿ ಆಟ ಆಡುತ್ತಿದ್ದೆವು. ಜೂಟಾಟ, ಕಣ್ಣು ಮುಚ್ಚಾಲೆ ಆಡಿ ಸುಸ್ತಾದಾಗ ಆ ಮನೆಯ ಹೆಂಗಸರು ನಮಗೆ ಕುಡಿಯಲು ಬಾವಿಯ ನೀರು ಕೊಡುತ್ತಿದ್ದರು.. ಆ ನೀರು ಸಿಹಿಯಾಗಿರುತ್ತಿತ್ತು. ಮೈದಾನದ ಮಧ್ಯದಲ್ಲಿ ಪ್ಲಾಟ್ ಫಾರಂ ತರಹದ ಒಂದು ಕಟ್ಟೆ , ಅದಕ್ಕೆ ಹೊಂದಿಕೊಂಡು ಕಟಾಂಜನ.. ಆ ಗುಡಿಯ ದೇವರು ನಾಗಪ್ಪ. ಆಟದ ಮಧ್ಯ ದಣಿವಾರಿಸಿಕೊಳ್ಳಲು ಕಟ್ಟೆಯ ಸುತ್ತಲೂ ಕುಳಿತುಕೊಳ್ಳುತ್ತಿದ್ದೆವು. ಕೆಲವೊಮ್ಮೆ ಮನೆಯಲ್ಲಿ combined study ಮಾಡುವುದಾಗಿ ಪೊಟ್ಟಣದಲ್ಲಿ ತಿಂಡಿ ಕಟ್ಟಿಕೊಂದು ಇಲ್ಲಿಗೆ ಬರುತ್ತಿದ್ದೆವು. 2-3 ಗಂಟೆಗಳ ಆಟ,ತಿಂಡಿ ಕಾರ್ಯಕ್ರಮದ ಮದ್ಯೆ 15-20 ನಿಮಿಷ ಓದು ಇರುತ್ತಿತ್ತು.ಮಾರ್ಚ್ ಏಪ್ರಿಲ್ ತಿಂಗಳಲ್ಲಿ ವೆಲ್ವೆಟ್ ಹುಳ ಹಿಡಿಯೋದು, ಅದನ್ನು ಸಾಕೋದು recreational activity ಆಗಿರುತ್ತಿತ್ತು .ಪರೀಕ್ಷೆ ಸಮಯದಲ್ಲಿ ಕಟ್ಟೆ ನಾಗಪ್ಪನಿಗೆ ಒಂದು ನಮಸ್ಕಾರ ಹಾಕಿ, ಅಲ್ಲೇ ಬಿದ್ದಿರುತ್ತಿದ್ದ, ಮುಂಚಿನ ದಿನ ಯಾರೋ ಮುಡಿಸಿದ ಹೂಗಳನ್ನು ರಟ್ಟಿಗೆ ಸಿಕ್ಕಿಸಿಕೊಳ್ಳುತ್ತಿದ್ದೆವು.ರಸ್ತೆಯ ಮಾರ್ಗವಾಗಿ ಮನೆಗೆ ತಲುಪಲು 15 ನಿಮಿಷ ಬೇಕಾಗುತ್ತಿತ್ತು.ಅಡ್ಡ ದಾರಿಯಲ್ಲಿ ಹಳಿಗಳನ್ನು ಹಾಸಿ ಮನೆ ಸೇರಲು 7-8 ನಿಮಿಷ ಸಾಕಿತ್ತು.ಭಯ ಹುಟ್ಟಿಸುವ ದೊಡ್ಡ ಆಲದ ಮರವೊಂದು ಮಾರ್ಗ ಮಧ್ಯದಲ್ಲಿತ್ತು. ಆಮ್ಮನ ತಾಕೀತಿನಂತೆ ಹುಣ್ಣಿಮೆ ಅಮಾವಾಸ್ಯೆಯ ದಿನಗಳಂದು ಹಳಿಯ ಹಾದಿ ಬಳಸುವ ಹಾಗಿರಲಿಲ್ಲ. ಏಕೆಂದರೆ ಆ ದಿನ ಮೋಹಿನಿ, ಭೂತ ಪಿಶಾಚಿಗಳಿಗೆ ನಾರ್ಮಲ್ ಶೆಡ್ಯೂಲ್ ಜೊತೆರ್ಗೆ ಡೇ ಡ್ಯೂಟಿ ಇರುತ್ತಿತ್ತು ಅನ್ನೋ ನಂಬಿಕೆ.ಆವತ್ತು ಮರದ ಕಡೆ ನೋಡಲೂ ಹೆದರಿಕೆಯಾಗುತ್ತಿತ್ತು.
Google Image |
ಈ ಸಲದ ಮೇ ರಜದಲ್ಲಾದರೂ ಇಲ್ಲಿಂದ ಸಾಗರಕ್ಕೆ ರೈಲಲ್ಲಿ ಪ್ರಯಾಣಿಸಬಹುದೆಂದು ಆಸೆ ಇಟ್ಟುಕೊಂಡಿದ್ದೇನೆ. ಸಾಗರ ಸ್ಟೇಶನ್ ನಲ್ಲಿ ನಿಂತು'ಕೂಯ್' ಅಂದರೆ ಅಪ್ಪ ಮಗಳನ್ನು ಬರಮಾಡಿಕೊಳ್ಳಲು ಬರುತ್ತಾರೆ, ಆ ದಿನಗಳ ನಿರೀಕ್ಷೆಯಲ್ಲಿದ್ದೇನೆ...
( ಡಿಸೆಂಬರ್ 2012 ರಲ್ಲಿ ಬರೆದದ್ದು)