ಹೀಗೊಂದು ಕಡುಬು ಪುರಾಣ

 

 
                 


ಸುಮಾರು 10-15 ವರ್ಷಗಳ ಹಿಂದಿನ ಮಾತು.ಮಲೆನಾಡು ತವರುಮನೆಯಾದ ನನಗೆ, ಅಲ್ಲಿನ ಭೀಕರ ಮಳೆಗೆ ಯಾರಾದರೂ ನೆರೆಹೊರೆಯವರ ಮನೆಯಲ್ಲಿ ಹಲಸಿನ ಮರದ ರೆಂಬೆ ಮುರಿದು ಬಿದ್ದಾಗ ಅದರ ಎಲೆಗಳನ್ನು ತಂದು ಅಮ್ಮನಿಗೆ ಒಪ್ಪಿಸುವುದು ಅಪರೂಪದ ಕಾಯಕವಾಗಿತ್ತು.
ಆ ಎಲೆಗಳನ್ನು ಸ್ವಚ್ಛವಾಗಿ ತೊಳೆದು, ಖೊಟ್ಟೆ ಹೆಣೆಯಲು ಅಣಿಮಾಡಿಕೊಡುವುದಷ್ಟಕ್ಕೆ ನನ್ನ  ಜ್ನಾನ ಸೀಮಿತವಾಗಿತ್ತು.ನನ್ನಮ್ಮ ಆ ಎಲೆಗಳನ್ನು ಬಳಸಿ ರುಚಿ-ಶುಚಿಯಾದ ಖೊಟ್ಟೆ ಕಡುಬು ತಯಾರಿಸುತ್ತಿದ್ದರು.      
 
     ಮೊನ್ನೆ ಊರಿನಲ್ಲಿರುವ  ನನ್ನಮ್ಮ ಅನಿರೀಕ್ಷಿತವಾಗಿ ಬೆಂಗಳೂರಿಗೆ ಬರುವ ಪ್ರಸಂಗ ಎದುರಾಯಿತು.ಕಾರಣಾಂತರದಿಂದ ಅಮ್ಮನಿಗೆ ನಮ್ಮ ಮನೆಗೆ ಭೇಟಿ ಕೊಡಲಾಗಲಿಲ್ಲ.ಎಷ್ಟೆಂದರೂ ಮಾತ್ರವಾತ್ಸಲ್ಯ,ನನಗಾಗಿ ಊರಿಂದ ಸ್ವಲ್ಪ ಹಲಸಿನ ಎಲೆಗಳನ್ನು ತಂದಿದ್ದರು.ಜೊತೆಗೆ ಕಡುಬು ಮಾಡಿ ತಿನ್ನಿರೆಂಬ ಆದೇಶವನ್ನೂ ಇತ್ತರು.ಪಾಪ ಧಾವಂತದಲ್ಲಿ ಅಮ್ಮ, ಕಡುಬು ಹೆಣೆಯುವ ಕಡ್ಡಿಗಳನ್ನು  ಕೊಡಲು ಮರೆತೇಬಿಟ್ಟರು.ನಾನು ತಕ್ಷಣ ಫೋನಾಯಿಸಿದಾಗ"ಏನ್ಮಾಡಕ್ಕಾಗುತ್ತೆ,ಸಲ್ಪ ಎಲೆ ಹರಿದು ಉದ್ದಿನ ಹಿಟ್ಟಿಗೆ ಬೆರೆಸಿ ಇಡ್ಲಿ ಮಾಡು, ಕಡುಬಿನ ಪರಿಮಳ ಬರುತ್ತೆ, ಕಡುಬು ತಿಂದ ಹಾಗೆ ಇರುತ್ತೆ" ಎಂದು ಸಮಾಧಾನಿಸಿದರು. ಕಡ್ಡಿಗಳಿಲ್ಲ ಎನ್ನುವ ತಲೆಬಿಸಿ ಒಂದೆಡೆ, ವಯಸ್ಸು 30 ಡಾಟಿದರೂ ಖೊಟ್ಟೆ ಹೆಣಿಯಲು ಬರೊಲ್ಲ ಎನ್ನುವ ಕೀಳರಿಮೆ ಇನ್ನೊಂದೆಡೆ."ವೈ ನಾಟ್ ನೌ" ಎನ್ನುವ ಆಶಾಭಾವವೂ ಚಿಗುರಿತೆನ್ನಿ.
 
    ಛಕ್ಕೆಂದು ಒಂದು ಉಪಾಯ ಹೊಳೆಯಿತು.ನನ್ನ ಅತ್ತೆಯವರು ನಮ್ಮ ಮನೆಯ ತೆಂಗಿನ ಮರದ ನಾರನ್ನು ತೆಗೆದು ಕೆಲವು ಕಡ್ಡಿ ಪೊರಕೆಗಳನ್ನು ತಯಾರಿಸಿದ್ದರು.ಆ ಕಡ್ಡಿಪೊರಕೆಗಳನ್ನು ಮನೆಯ ಅಟ್ಟದ ಮೇಲೆ ಕಟ್ಟುಕಟ್ಟಾಗಿ ಜೋಡಿಸಿದ್ದು ನೆನೆಪಾಯಿತು.ಅಂತೂ ಅಟ್ಟ ಹತ್ತಿ 8-10 ಕಡ್ಡಿಗಳನ್ನು ತೆಗೆದು, ಡೆಟ್ಟಾಲ್ ನೀರು ಹಾಕಿ ತೊಳೆದು, ಖೊಟ್ಟೆ ಹೆಣೆಯಲು ಕುಳಿತೆ. 4 ಎಲೆಗಳನ್ನು '+' ಆಕಾರದಲ್ಲಿಟ್ಟು 2 ಕಡ್ಡಿಯಿಂದ ಕೂಡಿಸಿದೆ.ಅವನ್ನು ಮಡಿಸಿ 4 ಮೂಲೆಗಳನ್ನು 4 ಕಡ್ಡಿಗಳಿಂದ ಕೂಡಿಸಿ ಹೆಣೆದೆ.ಅಂತೂ 10 ಖೊಟ್ಟೆಗಳು ತಯಾರಾದವು.                       

   ಮೊದಲೇ ತಯಾರಿಸಿಟ್ಟಿದ್ದ ಇಡ್ಲಿ ಹಿಟ್ಟನ್ನು ಖಾಲಿ ಕಡುಬುಗಳಲ್ಲಿ ತುಂಬಿಸಿದೆ.1-2 ಖೊಟ್ಟೆಗಳಿಂದ ಆಣೆಕಟ್ಟಿನಿಂದ ಧುಮ್ಮಿಕ್ಕುವ ನೀರಿನಂತೆ, ಹಿಟ್ಟು ಹೊರಹೊಮ್ಮಿತು. ಈ ಪ್ರಮೇಯ ಎದುರಾಗಬಹುದೆಂದು ಮೊದಲೇ ನಿರೀಕ್ಷಿಸಿದ ನಾನು 2 ಕಡ್ಡಿಗಳನ್ನು ಸೇರಿಸಿ ಹಿಟ್ಟನ್ನು ತಡೆದುಬಿಟ್ಟೆ.ಹತ್ತೂ ಕಡುಬುಗಳನ್ನು ಇಡ್ಲಿ ಕುಕ್ಕರ್ ಒಳಗೆ ಜೋಡಿಸಿ ಒಲೆ ಹತ್ತಿಸಿದೆ.
              
                                              

   ಅತ್ತ ಒಲೆಯ ಮೇಲೆ ಬೇಯುತ್ತಿದ್ದ ಕಡುಬುಗಳು, ಇತ್ತ "Operation successful, patient died" ಆಗಿಬಿಟ್ಟರೆಂದು ಗಾಬರಿಯಾದ ಮನಸ್ಸು, ಹೇಗೆ ಆಗಲಿ ಆಗಲಿ ಇನ್ನೊಮ್ಮೆ ಎಲೆ ಸಿಕ್ಕಾಗ "ಮರಳಿ ಯತ್ನವ ಮಾಡು"ಎಂದು ಸಾಂತ್ವನ ಮಾಡಿಕೊಂಡೆ.
 
   ಹೊಗೆಯಾಡುತ್ತಿದ್ದ ಇಡ್ಲಿ ಕುಕ್ಕರಿನಂದ ಕಡುಬು ಹೊರಗೆ ತೆಗೆಯುವ ಸಮಯವಾಯಿತು.ಒಂದೊಂದೇ ಕಡುಬುಗಳನ್ನು ತೆಗೆದು ಪ್ಲೇಟಿಗೆ ಹಾಕಿದೆ.ಚತುರ್ಭುಜಾಕೃತಿಯಲ್ಲಿದ್ದ  ಕಡುಬುಗಳು ನನ್ನನ್ನು ನೋಡಿ ಮುಗುಳ್ನಕ್ಕಂತೆ ಭಾಸವಾಯಿತು.ನನಗಂತೂ ಒಮ್ಮೆಲೇ ಹತ್ತು ಮಕ್ಕಳನ್ನು ಹೆತ್ತಷ್ಟು ಸಂಭ್ರಮ.ನನ್ನ ಈ ಸಂಭ್ರಮದಲ್ಲೂ, ಕಡುಬು ಸವಿಯುವುದರಲ್ಲಿಯೂ ಮನೆಮಂದಿಯೆಲ್ಲ ಜೊತೆಯಾದರು.ಅಂತೂ 'ಕಡುಬು ಪುರಾಣ' ಸುಖಾಂತ್ಯ ಕಂಡಿತು.

(2012  ಜನೆವರಿಯಲ್ಲಿ  ಬರೆದದ್ದು)

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ