ಸಾವಿಲ್ಲದ ನಾಳೆಗಳು...ನಾಳೆಗಳಿಲ್ಲದ ಸಾವುಗಳು...
Speaking Tree ಆಂಗ್ಲಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಬಂದ ಸಣ್ಣ ಕಥೆ ಯನ್ನು ಕನ್ನಡೀಕರಿಸಿ ಅದಕ್ಕೆ ನಂದೊಂದಿಷ್ಟು ಸಾಲುಗಳನ್ನು ಸೇರಿಸಿ ಕಥೆಯನ್ನು ಸ್ವಲ್ಪ ವಿಸ್ತೃತಗೊಳಿಸಿದ್ದೇನೆ..
ಖಾಸಗಿ ಸಂಸ್ಥೆಯಲ್ಲಿ ಅವನೊಬ್ಬ ಗುಮಾಸ್ತ. ಮಡದಿ, ಎರಡು ಮಕ್ಕಳು,ಸ್ವಂತ ಮನೆ, ಕಾರು ಜೊತೆಗೆ ಐದಂಕಿ ಸಂಬಳದ ಜೀವನ. ಬೆಳಗಾಗೆದ್ದು ಪ್ರಾತಃವಿಧಿಗಳನ್ನು ಪೂರೈಸಿ, ನ್ಯೂಸ್ ಪೇಪರನೊಮ್ಮೆ ತಿರುವಿ, ತಿಂಡಿ ತಿಂದು ಮಕ್ಕಳಿಬ್ಬರನ್ನು ಅವರ ಕಾಲೇಜಿಗೆ ಡ್ರಾಪ್ ಕೊಟ್ಟು ಆಫೀಸ್ ಸೇರೋದು, ತನ್ನ ಕೆಲಸಗಳನ್ನು ಅಚ್ಚುಕಟ್ಟಗಿ ಮುಗಿಸಿ ಸಾಯಂಕಾಲ 7ಕ್ಕೆ ಮನೆಗೆ ವಾಪಾಸಾಗೋದು, ಮಡದಿ ಮಕ್ಕಳೊಂದಿಗೆ ನಾಲ್ಕಾರು ಮಾತು,ಟಿ.ವಿ.ಯಲ್ಲಿ ಚಾನೆಲ್ ಬದಲಾಯಿಸುತ್ತಾ ನ್ಯೂಸ್ ನೋಡೋದು, ಹಾಗೇ ಊಟ , ಹಾಸಿಗೆ ಸೇರೋದು...ಹೀಗೆ ಸಾಗಿತ್ತು ದಿನಚರಿ..
ಹೀಗೆ ಒಮ್ಮೆ ಚಾನೆಲ್
ಬದಲಾಯಿಸುತ್ತಿದ್ದಾಗ ಒಂದು ವಿಷಯ ಆತನ ಗಮನ ಸೆಳೆಯಿತು. ಅದು ವ್ಯಕ್ತಿಯೊಬ್ಬನ ಸರಾಸರಿ ಜೀವಿತಾವಧಿ ಎಷ್ಟು, ಎಂಬ ಅಂಕಿಅಂಶದ ಬಗೆಗಿನ ಸಮೀಕ್ಷೆಯ ವರದಿ.
ಈಗಾಗಲೇ 50 ವರ್ಷದ ಆಸುಪಾಸಿನಲ್ಲಿದ್ದ. ಆತ ತಾನು ಬದುಕಿರಬಹುದಾದ ವರ್ಷ, ದಿನಗಳನ್ನು ಅಂದಾಜಿಸುತ್ತಾ ನಿದ್ದೆ ಹೋದ.. ಯಾಕೋ ಈ ವಿಷಯ ಆತನನ್ನು ತೀವೃವಾಗಿ ಕಾಡಿತು. ಮರುದಿನ ಬೆಳಗ್ಗೆ ಎದ್ದವನೇ ಅಂಗಡಿಗೆ ತೆರಳಿ ಅಷ್ಟೇ ಅಂಕಿಯ ಗೋಲಿಗಳನ್ನು ಕೊಂಡು ತಂದ.ಜಾಡಿಯೊಂದರಲ್ಲಿ ಅವನ್ನು ತುಂಬಿಸಿದ.
ನಿತ್ಯವೂ ಬೆಳಗ್ಗೆ ಒಂದೊಂದು ಗೋಲಿಯನ್ನು ಮನೆಯ ಪಕ್ಕಕ್ಕಿದ್ದ ಕೆರೆಗೆ ಎಸೆಯುತ್ತಿದ್ದ.ದಿನಗಳು ಸರಿದಂತೆ ಇವನಲ್ಲೇನೋ ಬದಲಾವಣೆ.ತಾನು ಬದುಕಿರುವಷ್ಟು ದಿನ ಲವಲವಿಕೆಯಿಂದಿರಬೇಕೆಂಬ ಆಸೆ ಬಲವಾಗುತ್ತಿತ್ತು.
ಆಯುಧ ಪೂಜೆ ದಿನ ಮಾತ್ರ ಸ್ನಾನ ಕಾಣುತ್ತಿದ್ದ ಇವನ ಕಾರು , ಸ್ಕೂಟರ್ರಿಗೆ ಸಂಡೇ ಸಂಡೆ ಬಾತ್
ಮಾಡಿಸಟೊಡಗಿದ, ದೇವರಕೋಣೆಯಲ್ಲಿದ್ಹ್ದ ದೇವರಿಗೂ ಸುಂದರ ಅಲಂಕಾರ ಲಭಿಸಿತು.ಟ್ರಫಿಕ್ ಜಾಮ ಆಗೋದೇ ಹಾರ್ನ್ ಬಾರಿಸಲು ಎಂದುಕೊಂಡವ ಬೀದಿಬದಿಯಲ್ಲಿ ಆಡುವ ಮಕ್ಕಳ ನಿಷ್ಕಲ್ಮಷ ನಗೆ ಖುಶಿ ಕೊಡುತ್ತಿತ್ತು.
ಶಿಳ್ಳೆ ಹಾಕುತ್ತ ಕಾರ್ ಡ್ರೈವ್ ಮಾಡಿ ಆಫೀಸ್ ಸೇರುತ್ತಿದ್ದ.ಸಾಯಂಕಾಲ ಶೂ ಲೇಸ್ ಬಿಚ್ಚುತ್ತಾ
ಮನೆಯೊಳಗೆ ಪಾದಾರ್ಪಣೆ ಮಾಡುತ್ತಿದ್ದವನು ಬಾಗಿಲು ತೆರೆದ ಹೆಂಡತಿಗೆ ಕಣ್ಣು ಮಿಟುಕಿವಷ್ಟು ಬದಲಾದ. ಮಕ್ಕಳೊಂದಿಗಿನ ಔಪಚಾರಿಕ ಮಾತುಗಳು ಹರಟೆಯಾಗಿ
ಬದಲಾಗಿದ್ದವು ..ಇತ್ತ ಬಾಟಲಿಯೊಳಗಿನ ಗೋಲಿಗಳೂ ಕಡಿಮೆಯಾಗುತ್ತಿದ್ದವು.
ಒಂದು ಕಾಲದಲ್ಲಿ ನಿದ್ದೆಗೆಡಿಸಿದ ಸಿನೆಮಾ ಹಾಡುಗಳನ್ನು ಯೂ ಟ್ಯೂಬಲ್ಲಿ ಹುಡುಕಿ ಕೇಳತೊಡಗಿದ, ಫೋನಲ್ಲಿ ಹಳೆಯ ಮಿತ್ರರೊಂದಿಗೆ ಮಾತನಾಡಿದ. ಸತ್ಯನಾರಾಯಣಪೂಜೆ, ಬರ್ತಡೇ, ಆನಿವರ್ಸರಿ ಹೆಸರಿನಲ್ಲಿ ಗೆಟ್ ಟುಗೆದರ್ ಏರ್ಪಡಿಸಿ ಎಲ್ಲರನ್ನು ಬರಮಾಡಿಕೊಳ್ಳುತ್ತಿದ್ದ. ಅಂತೂ ಆತ ಜೀವನವನ್ನು ಜೀವಿಸತೊಡಗಿದ್ದ..
ಆ ದಿನ ಬಂತು,
ಜಾಡಿಯಲ್ಲಿ ಈಗ ಒಂದೇ ಒಂದು
ಗೋಲಿ ಉಳಿದಿತ್ತು.ಸ್ನಾನ ತಿಂಡಿಯ ನಂತರ ಆ ಗೋಲಿಯನ್ನು ತೆಗೆದುಕೊಂಡು
ಹೋಗಿ ಟೇರೇಸಿನ ಮೇಲೆ ನಿಂತುಕೊಂಡ, ಗೋಲಿಯನ್ನು ಕೆರೆಗೆ ಏಸೆದ, ಈಗ ಬಾಟಲಿ ಪೂರಾ
ಖಾಲಿ!!!
.
Google Image |
ತಕ್ಷಣ ಅಂಗಡಿಗೆ ದೌಡಾಯಿಸಿ ಇನ್ನೊಂದಿಷ್ಟು ಗೋಲಿಯನ್ನು ಕೊಂಡು ತಂದು ಜಾಡಿಯಲ್ಲಿ ತುಂಬಿಸಿದ .:-) :-) :-)
ಮಿತ್ರರೊಬ್ಬರು ಹೇಳಿದಂತೆ, ಸಾವಿಲ್ಲದ ನಾಳೆಗಳು...ನಾಳೆಗಳಿಲ್ಲದ ಸಾವುಗಳು...
(ಸೆಪ್ಟೆಂಬರ್ 2012 ರಲ್ಲಿ ಬರೆದದ್ದು)