ಲೆಫ್ಟಿಯಾಗಿ ಹುಟ್ಟೋದು ರೈಟ್ ಅಲ್ಲವೇ ?!?!

 ನಗಾಗ ನಾಲ್ಕು ವರ್ಷ. ಬಾಲವಾಡಿ ಮುಗಿಸಿ ಶಾಲೆಗೆ ಸೇರುವ ಸಮಯ. ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಅಪ್ಪ ಹೇಳಿದ ಮಾತು, " ನನ್ನ ಮಗಳಿಗೆ ಊಟ ತಿಂಡಿ ಮಾಡೋದೇನೋ ಬಲಗೈಯಲ್ಲಿ ಅಭ್ಯಾಸ ಮಾಡಿಸಿದೀವಿ , ಆದ್ರೆ ಯಾಕೋ ಹುಡುಗಿ ಬರಿಯೋದು ಮಾತ್ರ ಎಡಗೈಯಲ್ಲೇ, ಈಗ ಎನು ಮಾಡೋದು?"   "ಇರಲಿ ಬಿಡಿ, ಮೆದುಳಿನ ಬಲಭಾಗ ಚುರುಕಾಗಿದ್ದವರು ಎಡಚರಾಗ್ತಾರೆ, ಅದೇನು ಊನತೆಯಲ್ಲ, ಸುಮ್ನೆ ಬೈದು, ಹೊಡೆದು ತಪ್ಪಿಸೋದು ಬೇಡ" ಎಂದರು ಮೇಷ್ಟ್ರು. ಎಡವೋ ಬಲವೋ ಅಂತು ಮಗಳು ಚುರುಕಿದ್ದಾಳೆ ಅಂತ ಅಪ್ಪ ನಿಟ್ಟುಸಿರು ಬಿಟ್ಟಿದ್ದರೇನೋ!!

   ಪ್ರೈಮರಿ ಶಾಲೆಯಲ್ಲಿ  ಎಡಚಳಾಗಿದ್ದ ಬಗ್ಗೆ ಆದ  ತೊಂದರೆಗಳು ನನಗೇನೂ ನೆನಪಿಲ್ಲ, ಹೈಸ್ಕೂಲು ಓದಿದ್ದು ಗರ್ಲ್ಸ್ ಕಾನ್ವೆಂಟಲ್ಲಿತೊಂದರೆ ಶುರುವಾಗಿದ್ದೇ ಕಾಲೇಜಿನ ಮೆಟ್ಟಿಲೇರಿದ ಮೇಲೆ.  3-4 ಕಿ. ಮೀ. ಸೈಕಲ್ ತುಳಿದು ಕಾಲೇಜು ಪ್ರವೇಶಿಸುವಾಗ ದೂರದಿಂದ ಯಾರೋ " ಏಯ್ ಲೆಫ್ಟೀ ಆರಾಮಾ" ಅಂತಲೋ, "ರೊಡ್ಡೀ ಹೇಗಿದೀಯಾ" ಅಂತಲೋ ಕೂಗೋರು..ಕ್ಲಾಸ್ ರೂಮ್ ಗೆ ಬಂದು ಕುಳಿತುಕೊಳ್ಳುತ್ತಿದ್ದದ್ದು ಬೆಂಚಿನತುದಿಯ ಸೀಟ್ ನಲ್ಲಿಯೇ  .. ಮಧ್ಯವೇನಾದರೂ ಕುಳಿತರೆ ಪ್ರಾಧ್ಯಾಪಕರು ನೋಟ್ಸ್   ಕೊಡುವಾಗ, ಬರೆಯುತ್ತಿರುವ ನನ್ನ ಎಡಗೈ ಪಕ್ಕ ಕುಳಿತ ಗೆಳತಿಯ ಬಲಗೈಗೆ ಡಿಕ್ಕಿ ಹೊಡೀತಿರ್ತಿತ್ತು.ನೋಟ್ಸ್ ಬರಿಯೋದು ಹೇಗೋ ಸಂಭಾಳಿಸುತ್ತಿದ್ದ  ನನಗೆ ತೊಂದರೆಯಾಗುತ್ತಿದ್ದದ್ದು ಪ್ರ್ಯಾಕ್ಟಿಕಲ್ ಕ್ಲಾಸಲ್ಲಿ.. 

   "Dissect the cockroach, pin it with left hand and separate the esophagus with forceps by right hand'    ಅನ್ನೋ Zoology ಮೇಡಮ್ಮು, "Measure  width with screw gauge"  ಅಂತ ಹೇಳೋ Physics ಪ್ರಾಧ್ಯಾಪಕರು.ಅವರ ಲೆಫ್ಟ್ ಅನ್ನು ರೈಟ್ ಎಂದೂ, ರೈಟ್ ಅನ್ನು ಲೆಫ್ಟ್ ಅಂತ ನಾನು ಹೇಗೋ ಸಂಭಾಳಿಸುತ್ತಿದ್ದೆ.. ಎಡವಟ್ಟಾಗುತ್ತಿದ್ದದ್ದೇ  ಕೆಮಿಸ್ಟ್ರಿ ಲ್ಯಾಬ್ Titration  ಎಕ್ಸ್ಪೆರಿಮೆಂಟಿನಲ್ಲಿ. "Gently drop the  solution drop by drop by tilting the knob of burette in right hand, and shake the conical flask  by left hand carefully "  ಎಂದು ಪ್ರೊಫೆಸರ್ ಆದೇಶಿಸಿದರೆ, .ಲೆಫ್ಟ್ ರೈಟ್ ಗೊಂದಲದಿಂದ ತೊಂದರೆಗೆ ಒಳಗಾಗುತ್ತಿದ್ದೆ  ಒಮ್ಮೆಯಂತೂ ಕೊನಿಕಲ್ ಫ್ಲಾಸ್ಕ್ ಬದಲಾಗಿ  ಗ್ಲಾಸ್ ಬ್ಯುರೆಟನ್ನು ಘಲ ಘಲ ಅಲುಗಾಡಿಸಿದ್ದೆ, ಬ್ಯುರೆಟ್ಟು ವುಡನ್ ಸ್ಟ್ಯಾಂಡಿಂದ ಕಿತ್ತು ಬಂದಿತ್ತು, ಕೊನಿಕಲ್ ಫ್ಲಾಸ್ಕ್ ಕೈ ಜಾರಿತ್ತು.

Google Image 

   "ಹೊಲಿಯುವವರ ಬಲಕ್ಕೆ ಕೂರಬಾರದು, ಅಳುವವರ ಎಡಕ್ಕೆ ಕೂರಬಾರದು"ಎಂಬ   ಗಾದೆ ಮಾತು ನನ್ನ ಮಟ್ಟಿಗೆ ವಿರುದ್ದವಾಗಿತ್ತು. ನಾನು ಹೊಲಿಯುವಾಗ ಯಾರೂ  ಎಡಕ್ಕೆ ಕೂರ್ತಾ ಇರಲಿಲ್ಲ, ಅಳುವಾಗ?!?! (ಛೇ ! ಮೂಗು ಒರೆಸಿಕೊಳ್ಳುವಷ್ಟು   ಯಾವಾಗಲೂ ಅತ್ತಿಲ್ಲ ಬಿಡಿಜಾರ್ಜ್ ಬುಷ್, ವಿಲ್ಲಿಸ್ ಜೀಪ್,ಇವು ಆಚೀಚೆ ಮನೆಯ ಆಂಟಿ ಅಂಕಲ್ ನನಗಿಟ್ಟಿರುವ ನಿಕ್ ನೇಮುಗಳು.ಪಕ್ಕದ ಮನೆಗೆ ಹೊಸದಾಗಿ ಬಾಡಿಗೆಗೆ ಬಂದಿದ್ದ ಆಂಟಿಗೆ ಎಡಗೈಯಲ್ಲೇ ಕ್ರೋಶಾ ಹೆಣೆಯಲು ಕಲಿಸಿಬಿಟ್ಟಿದ್ದೆ!!..

   ಅಂತೂ ಡಿಗ್ರೀ ಮುಗಿಸಿದ ಮಗಳಿಗೆ ಅಪ್ಪ ವರಾನ್ವೇಷಣೆ ಕಾರ್ಯ ಶುರುಹಚ್ಚಿಕೊಂಡರು."ಅಪ್ಪ, ಜಾತಕದ ಜೊತೆ ಬಯೋಡೇಟಾಡಲ್ಲಿ ಹುಡುಗಿ ಲೆಫ್ಟಿ ಅಂತ ಬರಿ" ಎಂದೆ. "ಸುಮ್ನಿರು ಪೆದ್ದೇ ,ಅದೂ ಒಂದು ಕೊರತೆಯೇ.. ಹಾಗೆಲ್ಲಾ ಏನೂ ಇಲ್ಲ"  ಅಂದರು.ಅಷ್ಟಾದರೂ ಭಾವೀ ಪತಿರಾಯರ ಹತ್ತಿರ ನಾನು ಲೆಫ್ಟಿ ಯಾದರೆ ಅವರ ಮನೆಯಲ್ಲಿ ಯಾರಿಗೂ ಅಭ್ಯಂತರವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದೆ. "ಗಂಡನ ಮನೆಯಲ್ಲಿ ತಗ್ಗಿ ಬಗ್ಗಿ ನಡೆಯಬೇಕು, ಯಾರಿಗೂ ಎದುರುತ್ತರ ಕೊಡಬಾರದು" ಅನ್ನುವ  ಜನೆರಲ್ ಉಪದೇಶಗಳೊಂದಿಗೆ ಅಮ್ಮನದೊಂದು  ಟಿಪ್ಪಣಿ "ನೆನಪಿರಲಿ,  ಊಟ ಬಡಿಸಬೇಕಾದರೆ ಬಲಗೈಲೇ ಬಡಿಸು "

   ಊಟದ ವಿಷಯಹೇಳಿದ್ದ ಅಮ್ಮ ದೇವರ ಮನೆ ವಿಷಯ ಹೇಳೇ ಇರಲಿಲ್ಲ. ಎಡಗೈಯಲ್ಲಿ ದೇವರಿಗೆ ದೀಪ ಹಚ್ಚೋದು ಸರಿಯಲ್ವಂತೆ, ಬಲಗೈಯಲ್ಲಿ ಕಡ್ಡಿ ಗೀರಲು ನನಗೆ ಬರೊಲ್ಲ. ಎಡಗೈಯಲ್ಲಿ ಕಡ್ಡಿ ಗೀರಿ ಅದನ್ನು ಬಲಗೈಗೆ ದಾಟಿಸಿ  ಬತ್ತಿ ಉರಿಸುವಷ್ಟರಲ್ಲಿ ನನ್ನ ತೋರುಬೆರಳು ಸುಟ್ಟಿರುತ್ತಿತ್ತು.ಅಸಹಾಯಕಳಾಗಿ ಗೋಪುರದಲ್ಲಿರುವ ದೇವರನ್ನು ನೋಡಿದಾಗ " ಹೆಂಗೂ ದೀಪ ಚ್ತಾ  ಇದೀಯಲ್ಲ ತಾಯಿ, ಯಾವುದೋಒಂದು ಕೈ ಹಚ್ಚಿ ಮುಗಿಸು' ಅನ್ನೋ ಭಾವನೆ ವಿಗ್ರಹದ ಮುಖದ ಮೇಲೆ ಕಾಣಿಸುತ್ತಿತ್ತುಎಲ್ಲರಿಗೂ ಒಳ್ಳೇದನ್ನೇಮಾಡಪ್ಪ ಅಂತ ಶುರುವಾಗೋ ನನ ಪ್ರಾರ್ಥನೆಯ ಕೊನೆಯ ಸಾಲು ಹೀಗಿರ್ತಿತ್ತು. "ನನ್ನನ್ನು ಎಷ್ಟೇ ಪ್ರಸಿದ್ದ  ವ್ಯಕ್ತಿಯನ್ನಾದರೂ ಮಾಡು ಆದರೆ ಪ್ರತಿಮಾ  ಶಾನಭಾಗರು ಜ್ಯೊತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ ಎನ್ನೋ ಪ್ರಮೇಯ ಬರದಂತೆ ಕಾಪಾಡು".

   "ಮೇಡಂ ಕೊರಿಯರ್".. ಅಂದಾಗ ಬಾಗಿಲು ತೆರೆದರೆ.. ಪುಣ್ಯಾತ್ಮನಿಗೆ ನಾನು ಚಾಚಿದ ಎಡಗೈ ಕಾಣದೆ ಪೆನ್ನನ್ನು ಬಲವಂತವಾಗಿ ನನ್ನ ಬಲಗೈಗೆ ತುರುಕಿ "ಸೈನ್ ಮಾಡಿ" ಅಂತಿದ್ದ.ಅಸಹನೆಯ ನೋಟದಿಂದ ಅವನನ್ನೊಮ್ಮೆ ಗುರಾಯಿಸಿ ಎಡಗೈಯಲ್ಲಿ ಸೈನ್ ಮಾಡಿಕೊಡುತ್ತಿದ್ದೆ.ಆಗ ನನ್ನ ಮುಖದಲ್ಲಿ ಒಂದು ಕಿರುನಗೆ.. ಎಷ್ಟೆಂದರೂ ಅದೊಂದು ಪೆನ್ನು, ಉರಿಯುವ ಬೆಂಕಿ ಕಡ್ಡಿ ಅಲ್ಲವಲ್ಲಾ!!!

   ಎಲ್ಲರೂ ನೀರಿನ ಬಿಂದಿಗೆಯನ್ನು, ಪುಟ್ಟ ಮಕ್ಕಳನ್ನು  ಎಡ ಕಂಕುಳಿನಲ್ಲಿ ಎತ್ತಿಕೊಂಡರೆ, ನನ್ನದು ಉಲ್ಟಾ ದಿಕ್ಕು..ಸ್ನಾನ ಮಾಡಿದ ಮಗಳಿಗೆ ನಾನು ಮುಂಚೆ ಹಾಕೊದು ಯುನಿಫಾರಂನ ಎಡಗೈ.. ಅಂತೆಯೇ ಎಡ ಶೂ ಮೊದ್ಲು.. ಅವಳು ಬಲಗಾಲನ್ನು ಮುಂದಿಕ್ಕಿ ನನ್ನ ಹತ್ತಿರ ಬೈಸಿಕೊಳ್ಳುತ್ತಾಳೆ..ಸಾಲದ್ದಕ್ಕೆ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳೂ(ಕಂಪ್ಯೂಟರ್ ಮೌಸ್ ಕೂಡ) ಬಳಸುವಾಗ ನನಗೆ ತೊಂದರೆ ಕೊಡುತ್ತವೆ, ಆದರೆ ನಾನೀಗ ಅದಕ್ಕೆ  ಹೊಂದಿಕೊಂಡಿದ್ದೇನೆ. ಇಷ್ಟೆಲ್ಲ ಕಿರಿಕಿಯ ನಡುವೆಯೂ ಎಡಚರಾಗಿ ಹುಟ್ಟಿದರೆ ಲಕ್ಕಿ ಅಂತೆ, ಜಾಣರಂತೆ, ಸಾವಿರಕ್ಕೊಬರು ಹಾಗೆ ಹುಟ್ಟೋದಂತೆ, ಅಂಥವರಿಗಾಗಿಯೇ ವರ್ಷದಲ್ಲಿ ಒಂದು ದಿನ, ಆಗಸ್ಟ್ 13,  ಮೀಸಲಂತೆ"   ಅನ್ನೋ  ಮಾತುಗಳು ಮನಸಿನೊಳಗೆ ಖುಷಿ ಕೊಡ್ತಾವೆ. ನನ್ನ ಮಗಳು ಪರಿ ಲೆಫ್ಟಿ ಅಲ್ಲದಿದರೂ, ನನ್ನ ಅಕ್ಕನಮಗ ನಾಲ್ಕು ವರ್ಷದ  ನಕುಲ ನಲ್ಲಿ ನನ್ನ geneಗಳು transfer  ಆಗಿವೆ.. ಪಾಪ ಅವನ ಕಷ್ಟ ನಂಗೆ ಮಾತ್ರ ಅರ್ಥ ಆಗೋದು..  


(ಜನೆವರಿ 2012 ರಲ್ಲಿ ಬರೆದದ್ದು)

 

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ