ಒಂದು ಬ್ರೆಡ್ಡಿನ ಕತೆ
ಹೈಸ್ಕೂಲಿನ ಇಂಗ್ಲೀಷ್ ಪಠ್ಯದಲ್ಲಿ ನಮಗೊಂದು ಕಥೆಯಿತ್ತು.ನನಗೆ ಆ ಕತೆ ಬಹಳ ಇಷ್ಟವಾಗಿತ್ತು, ಆದರೆ ಈಗ ನನಗೆ ಆ ಕಥೆಯ ಹೆಸರಾಗಲೀ, ಲೇಖಕರಾಗಲೀ, ಕಥೆಯ ಪಾತ್ರಗಳ ಹೆಸರಾಗಲೀ ಯಾವೂದೂ ನೆನಪಿಲ್ಲ. ಕಥಾಸಾರಾಂಶ ಮಾತ್ರ ನೆನಪಿನಲ್ಲಿದೆ. ಆ ಕಾರಣ ಇಲ್ಲಿ ನಾನು ಕೇವಲ ಸರ್ವನಾಮಗಳನ್ನೇ ಬಳಸಿದ್ದೇನೆ.
ಕಥೆ ಹೀಗಿದೆ ....
ಅದೊಂದು ಊರು. ಆ ಊರಿನಲ್ಲಿ ಒಂದು ಬೇಕರಿ..ಬೇಕರಿಯ ಯಜಮಾನ ಕೆಲವು ಕೆಲಸಗಾರರನ್ನು ನೇಮಿಸಿದ್ದ.ಆ ಕೆಲಸಗಾರರಲ್ಲಿ ಒಬ್ಬ ವಿಧವೆ ಕೂಡ ಇದ್ದಳು.ವಯಸ್ಸಿನಲ್ಲಿ ಚಿಕ್ಕವಳು, ಪಾಪ ಚಿಕ್ಕ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡಿದ್ದಳು. ಬೇಕರಿಗೆ ಹೊಂದಿಕೊಂಡಂತೆಯೇ ಪಕ್ಕದ ಕೋಣೆಯಲ್ಲಿ ಆಕೆಯ ವಾಸ್ತವ್ಯ, ಸಹಜ ಸುಂದರ ರೂಪವತಿಯಾದ ಆಕೆ , ಯಾವಾಗಲೂ ಮಾಸಲು ಗೌನನ್ನು ಧರಿಸಿ, ತಲೆಗೂದಲನ್ನು ತೀರ ಸಹಜ ರೀತಿಯಲ್ಲಿ ಬಾಚಿ , ಮುಖದ ಮೇಲೆ ಯಾವುದೇ ರೀತಿಯ ಭಾವನೆಗಳಿಲ್ಲದೇ ತಾನಾಯ್ತು ತನ್ನ ಕೆಲಸವಾಯ್ತು ಎಂದು ಇರುತ್ತಿದ್ದಳು . ಬೇಕರಿಯ ಗ್ರಾಹಕರಿಗೆ " ಹೌ ಕುಡ್ ಐ ಹೆಲ್ಪ್ ಯೂ" ಎನ್ನೋದೊಂದೇ ಮಾತು ಆಕೆ ಆಡುವುದು. ಹೀಗೆ ಸಾಗಿತ್ತು ಆಕೆಯ ಜೀವನ...
ದಿನಗಳು ಸಾಗುತ್ತಿದ್ಡವು . ಒಂದು ಸಾಯಂಕಾಲ ಸುಮಾರು ಅವಳಷ್ಟೇ ವಯಸ್ಸಿನ ಒಬ್ಬ ತರುಣ ಬೇಕರಿಗೆ ಬಂದ. ತೆಳ್ಳಗಿನ ಮೈಕಟ್ಟು, ಮುಖಕ್ಕೆ ಒಪ್ಪುವ ಕನ್ನಡಕ, ತೀರಾ ಸಾದಾ ದಿರಿಸು, ಕುರುಚಲು ಗಡ್ಡ ,ಬಗಲಲ್ಲೊಂದು ಚೀಲ ಧರಿಸಿದ ವ್ಯಕ್ತಿ. "ಅರ್ಧ ಪೌಂಡ್ ಸ್ಟೇಯ್ಲ್ಡ್ ಬ್ರೆಡ್ ಪ್ಲೀಸ್ " ಅಂದ. ಆಗೆಲ್ಲ ಸ್ಟೇಲ್ಡ್( ಮುಂಚಿನ ದಿನದ ) ಬ್ರೆಡ್ , ಫ್ರೆಶ್ ಬ್ರೆಡ್ಡಿಗಿಂದ ಅರ್ಧ ಬೆಲೆಯಲ್ಲಿ ಸಿಗುತ್ತಿತ್ತು. ಈಕೆಯಿಂದ ಬ್ರೆಡ್ ಪಡೆದುಕೊಂಡು ಹಣ ನೀಡಿ ಆತ ಹೊರಟುಹೋದ .ಹೀಗೆಯೇ ಪ್ರತೀ ಸಾಯಂಕಾಲ 5-6 ಗಂಟೆಯ ಮಧ್ಯೆ ಆತ ಬರುವುದು , ಅರ್ಧ ಪೌಂಡ್ ಬ್ರೆಡ್ ಕೊಳ್ಳುವುದು , ಈಕೆ ಕೊಡುವುದು ನಡೆಯುತ್ತಿತ್ತು. ಬಹಳ ದಿನದಿಂದ ಅಂಗಡಿಗೆ ಬರುತ್ತಿರುವ ಕಾರಣ ಆತ ಬ್ರೆಡ್ ಪಡೆದ ನಂತರ ಸೌಜನ್ಯಕ್ಕಾಗಿ ಮುಗುಳ್ನಗುತ್ತಿದ್ದ. ಈಕೆಯು ಪ್ರತಿಯಾಗಿ ಕಿರುನಗೆ ಬೀರುತ್ತಿದ್ದಳು.
Google Image |
ದಿನಕಳೆದಂತೆ ಆಕೆ ಬದಲಾಗತೊಡಗಿದಳು. ಮಾಸಲು ಗೌನನ್ನು ಟ್ರಂಕೊಳಗಿಟ್ಟು ಬಣ್ಣ ಬಣ್ಣದ, ಚಿತ್ರ ಚಿತ್ತಾರದ ಗೌನನ್ನು ಧರಿಸತೊಡಗಿದಳು. ಸುಂದರವಾದ ಕೇಶಾಲಂಕಾರ, ತುಸುವೇ ಮೇಕಪ್ಪು ಮಾಡಿಕೊಂಡು ಇನ್ನೂ ಸುಂದರವಾಗಿ ಕಾಣುತ್ತಿದ್ದಳು.ಇಡೀ ದಿನ ಉಲ್ಲಾಸದಿಂದ ಇರುತ್ತಿದ್ದಳು . ಗ್ರಾಹಕರೆಲ್ಲರನ್ನು ಮುಗುಳ್ನಗೆಯಿಂದ ಎದುರುಗೊಳ್ಳುತ್ತಿದ್ದಳು.ಪ್ರತೀ ದಿನ 5 ಗಂಟೆಯಾದೊಡನೆ ಆತನ ಬರುವಿಕೆಗಾಗಿ ತವಕಿಸುತ್ತಿದ್ದಳು. ಈ ಮಧ್ಯೆ ಅನೇಕ ಪ್ರಶ್ನೆಗಳು ಅವಳಿಗೆ ಕಾಡುತ್ತಿದ್ದವು. ಆ ವ್ಯಕ್ತಿ ಸ್ಟೇಲ್ಡ್ ಬ್ರೆಡ್ ಕೊಳ್ಳುವುದಾದರೂ ಏತಕ್ಕೆ? ಡುಡ್ಡಿನ ಅಡಚಣೆಯೇನೋ, ಎರಡರಷ್ಟು ಹಣ ತೆತ್ತು ಫ್ರೆಶ್ ಬ್ರೆಡ್ ಕೊಳ್ಳಲು ಅಶಕ್ತನೇನೋ? ಅವನೊಂದಿಗೆ ಮನೆಯಲ್ಲಿ ಇನ್ನು ಯಾರಿರಬಹುದು? ತಾಯಿಯೇ? ಅಥವಾ ಹೆಂಡತಿ ಮಕ್ಕಳೇ??.. ಹೀಗೇ ಏನೇನೋ..
ಅದೊಂದು ದಿನ ಆತ ಬೇಕರಿಗೆ ಬಂದು ಎಂದಿನಂತೆಯೇ "ಒನ್ ಪೌಂಡ್ ಸ್ಟೇಲ್ಡ್ ಬ್ರೆಡ್ ಪ್ಲೀಸ್" ಅಂದ. ಇರುವ ಎಲ್ಲ ಧೈರ್ಯವನ್ನು ಒಟ್ಟುಮಾಡಿ ಈಕೆ ಫ್ರೆಶ್ ಬ್ರೆಡ್ಡನ್ನು ಒಳಗೆ ತೆಗೆದುಕೊಂಡು ಹೋಗಿ, ಆ ಸ್ಲೈಸ್ ಗಳ ಮಧ್ಯಕ್ಕೆ ಬೆಣ್ಣೆ ಯನ್ನು ಸವರಿ, ಪ್ಯಾಕ್ ಮಾಡಿ ತಂದು ಕೊಟ್ಟಳು .. ಇದನ್ನು ತಿಳಿಯದ ಆತ ಹಳಸಿದ ಬ್ರೆಡ್ ಬೆಲೆಯನ್ನು ತೆತ್ತು ಮುಗುಳ್ನಕ್ಕು ಹೊರಟು ಹೋದ.
ಅಂದು
ಇಡೀ ರಾತ್ರಿ ಆಕೆಗೆ ನಿದ್ದೆಯಿಲ್ಲ, ಇಂದು ಆತ ದಣಿದಂತೆ
ಕಾ ಣುತ್ತಿದ್ದ. ಪಾಪ ಮನೆಗೆ ಹೋಗಿ ತಿನ್ನಬೇಕೆಂದು ಬ್ರೆಡ್ ಪೊಟ್ಟಣವನ್ನು ತೆರೆದರೆ ಅವನಿಗೆ
ಅಚ್ಚರಿ ಮತ್ತು ಸಂತೋಷವಾಗುತ್ತದೆ. ಆತ ನನ್ನನ್ನು ಎಷ್ಟು
ಸ್ಮರಿಸುತ್ತಾನೋ, ಪಾಪ ಕೊನೆಯ ಬಾರಿ ಬೆಣ್ಣೆ ಸವರಿದ ಬ್ರೆಡ್ ತಿಂದಿದ್ದಾರೂ ಯಾವಾಗಲೋ???...
ಇಂತಹ
ಆಲೋಚನೆಯಲ್ಲಿ ಬೆಳಕು ಹರಿಯುತ್ತದೆ. ಆಕೆ ಖುಶಿ ಖುಶಿಯಾಗಿ ಕೆಲಸಕ್ಕೆ ತೆರಳುತ್ತಾಳೆ. ಆದರೆ
ಅಲ್ಲಿಯ ಸನ್ನಿವೇಶವೇ ಬೇರೆ.ಏನೋ ದೊಡ್ಡ ದೊಡ್ಡ ಸ್ವರಗಳಲ್ಲಿ ಮಾತುಗಳು ನಡೆಯುವುದು ಇವಳಿಗೆ ಕೇಳಿಸುತ್ತದೆ.ನೋಡಿದರೆ ಬೇಕರಿಯ ಮಾಲೀಕ ಆ ತರುಣನನ್ನು ಸಂತೈಸುತ್ತಿದ್ದಾನೆ.
ತರುಣ ಬಹಳ ಸಿಟ್ಟಲ್ಲಿ ಕೂಗಾಡುತ್ತಿದ್ದಾನೆ. ಮಾಲೀಕ ತಪ್ಪಯಿತೆಂದೂ, ತಮ್ಮನ್ನು ಕ್ಷಮಿಸಬೇಕೆಂದೂ ಕೇಳಿಕೊಳ್ಳುತ್ತಿದ್ದಾನೆ.
ಆ ತರುಣನೊಬ್ಬ ಖ್ಯಾತ ಚಿತ್ರಕಾರ. ಆ ಊರಲ್ಲಿ ಬಂದು
ಆಲ್ಲಿನ ಪ್ರಕೃತಿಯ ಸೊಬಗನ್ನು ತನ್ನ ಕಲೆಯಲ್ಲಿ ಚಿತ್ರಿಸುತ್ತಿರುತ್ತಾನೆ. ಆ ಚಿತ್ರವನ್ನು ಯವುದೋ
ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಾಗಿ ರಚಿಸುತ್ತಿರುತ್ತಾನೆ. ರಚಿಸುವಾಗ ಏನಾದರೂ ತಪ್ಪಾದಲ್ಲಿ ಇರೇಸರ್ ನಿಂದ ಅಳಿಸಿದರೆ ಅಲ್ಲಲ್ಲಿ ಕಪ್ಪು ಕಪ್ಪು ಗುರುತುಗಳು ಉಳಿಯಬಹುದೆಂಬ ಕಾರಣದಿಂದ ಆತ ಸ್ಟೇಲ್ಡ್ ಬ್ರೆಡ್ನಿಂದ
ಅದನ್ನು ಅಳಿಸುತ್ತಿರುತ್ತಾನೆ. ಇದರಿಂದ ಚಿತ್ರವನ್ನು ಅಳಿಸಿ ಪುನಃ ಬರೆದ್ದದು ಎಂದು ತಿಳಿಯುವುದಿಲ್ಲ. ಅವನು ರಚಿಸಿದ ಚಿತ್ರ
ಮುಕ್ತಾಯ ಹಂತದಲ್ಲಿರುತ್ತದೆ. ಆದರೆ ಆದಿನ ಆತ ಆಕೆ ನೀಡಿದ
ಬ್ರೆಡ್ ನಿಂದ ಚಿತ್ರದ
ದೋಷಗಳನ್ನು ಸರಿಪಡಿಸಲು ಹೋಗಿ ಇಡೀ ಚಿತ್ರದ ತುಂಬಾ ಬೆಣ್ಣೆ ಹರಡುತ್ತದೆ. ಇದರಿಂದ ಆತನ ರಚನೆ
ಮತ್ತು ಇಷ್ಟು
ದಿನದ ಪರಿಶ್ರಮವೆಲ್ಲ ಮಣ್ಣುಪಾಲಾಗುತ್ತದೆ.ಆ ಸಿಟ್ಟಿನಿಂದ ಆತ
ಅಲ್ಲಿ ಬಂದು ಜಗಳಕಾಯುತ್ತಿರುತ್ತಾನೆ. ತಗ್ಗಿಸಿದ ತಲೆಯಿಂದ ಈಕೆಯೂ ಆತನಲ್ಲಿ ಕ್ಷಮೆಯಾಚಿಸುತ್ತಾಳೆ. ಆತ ಸಿಟ್ಟಿನಿಂದಲೇ ಈಕೆಯನ್ನು
ದುರುಗುಟ್ಟುತ್ತಾ ಹೊರಟು ಹೋಗುತ್ತಾನೆ.
ಮರುದಿನ ಈಕೆ ಮತ್ತದೇ ಮಾಸಲು ಗೌನು ಧರಿಸಿ, ಮುಂಚಿನಂತೇ ಜಾಸ್ತಿ ಮಾತಿಲ್ಲದೇ ತನ್ನ ಡೆಸ್ಕ್ ಬಳಿ ನಿಂತು ಗ್ರಾಹಕರನ್ನು "ಎಸ್ , ಹೌ ಕುಡ್ ಐ ಹೆಲ್ಪ್ ಯು" ಎನ್ನುತ್ತಾಳೆ.
(ಜೂನ್ 2012 ರಲ್ಲಿ ಬರೆದದ್ದು)