ಒಲವಿನ ಬಣ್ಣಗಳು
“ಒಬ್ಬ ಪುರುಷನು ಕೇವಲ ಬೇಸಿಕ್ ಬಣ್ಣಗಳನ್ನು ಮಾತ್ರ ಗುರುತಿಸಬಲ್ಲನಾದರೆ ,ಸ್ತ್ರೀಯೊಬ್ಬಳು ಪ್ರತೀ ಬಣ್ಣದಲ್ಲೂ ಕನಿಷ್ಠ ಪಕ್ಷ 4-5 ಪ್ರಬೇಧಗಳನ್ನಾದರೂ ಗುರುತಿಸಬಲ್ಲಳು “ ಅನ್ನೋ ಪೋಸ್ಟೊಂದು ಕೆಲದಿನಗಳ ಹಿಂದೆ ಫೇಸ್ ಬುಕ್, ಫಾರ್ವರ್ಡೆಡ್ ಈ ಮೈಲ್ ಗಳಲ್ಲಿ ಹರಿದಾಡಿತ್ತು.
ಇದೇ ಕಾರಣಕ್ಕೆ( ಬಹುಶಃ ನೇರೋಲ್ಯಾಕ್) ಪೇಂಟ್ಸ್ ಕಂಪನಿಯವರು ಈ ಕಾನ್ಸೆಪ್ಟನ್ನು ಅಷ್ಟು ವರ್ಷಗಳ ಹಿಂದೆಯೇ ಕಮರ್ಶಿಯಲ್ ಒಂದರಲ್ಲಿ ಬಳಸಿಕೊಂಡಿದ್ದರು. ಮಹಿಳೆಯೊಬ್ಬಳು ಪೇಂಟ್ ಅಂಗಡಿಯೊಂದಕ್ಕೆ ಪಂಜರದಲ್ಲಿದ್ದ ಗಿಳಿಯೊಂದನ್ನು ತಂದು “ಮೇರಾವಾಲಾ ಗ್ರೀನ್” ಎಂದು ಬಣ್ಣವನ್ನು ಆರಿಸಿಕೊಳ್ಳುತ್ತಾಳೆ.
ಅದೇ ಶಾರುಖ್ ಖಾನ್ “ತೂ ಹೀ ತೂ
,ತೂ ಹೀ ತೂ ಸತರಂಗೀ
ರೇ”
ಅಂತ ಹಾಡಿ ಒಂದೇ ಪದದಲ್ಲಿ ಏಳೂಬಣ್ಣಗಳನ್ನು ತುಂಬಿ ಕೈತೊಳೆದುಕೊಂಡು
ಬಿಡುತ್ತಾನೆ.ಹಾಂ, ಕೆಲವು exceptions ಗಳಿವೆ, ನಮ್ಮ ವಿಷ್ಣುವರ್ಧನ್ ಬಂಧನ ಚಿತ್ರದಲ್ಲಿ “ಆಗಸದೋಕುಳಿ
ಬಣ್ಣ, ಬಾನಿನ
ನೀಲಿ ಬಣ್ಣ, “ ಅಂತೆಲ್ಲ ಎಷ್ಟೊಂದು
ಬಣ್ಣಗಳನ್ನು ಹೆಸರಿಸಿದ್ದಾರೆ
ಬಣ್ಣದ
ಕಂಪನಿಯವರು ಬೇಜ್,ಮಾವ್, ಬರ್ಗಾಂಡಿ , ಪೀಚ್ ಅಂತೆಲ್ಲ ಒಳ್ಳೊಳ್ಳೆ ಹೆಸರುಗಳನ್ನು ಕೊಟ್ಟಿದ್ದರೂ ನಾವುಗಳು ಅದಕ್ಕೆ ಕೊಟ್ಟಿರುವ ನಿಕ್ ನೇಮುಗಳು ಭಲೇ ಮಜವಾಗಿತ್ತವೆ.
ಹಸಿರು ಬಣ್ಣವನ್ನೇ ತೆಗೆದುಕೊಂಡರೆ ಅದರಲ್ಲಿ ಮೆಹೆಂದಿ ಗ್ರೀನ್, ಸಗಣಿ ಕಲರ್ ( ಹೀಗೊಂದು ಹೆಸರಿಟ್ಟು ಅಮ್ಮನಿಂದ ಬೈಸಿಕೊಂಡು ನಂತರ ಅದನ್ನು ಹೆಸರುಕಾಳು ಗ್ರೀನ್ ಅಂತ ಬದಲಿಸಿಕೊಂಡಿದ್ದಿದೆ), ಸೋಡಾ ಬಾಟಲ್ ಗ್ರೀನ್, ಎಲೆ ಚಿಗುರಿನ ಹಸಿರು, ರಾಮಾ ಗ್ರೀನ್ ..ಅಬ್ಬಬ್ಬಾ ಎಷ್ಟೊಂದು ಪ್ರಬೇಧಗಳು !!
ಇನ್ನು ನೇರಳೆ ಬಣ್ಣದಲ್ಲಿ , ನೇರಳೆ ಹಣ್ಣಿನ ಕಲರ್, ಹಣ್ಣಿನ ಒಳಗಿರೋ ನೇರಳೆ, ಈರುಳ್ಳಿ ಸಿಪ್ಪೆ ಕಲರ್, ಸುಳಿದ ಈರುಳ್ಳಿ ಕಲರ್ , ಇನ್ನೂ ಏನೇನೋ.. ಗ್ರೇ ಬಣ್ಣದಲ್ಲಿ, ಹಸಿ ಸಿಮೆಂಟ್,ಒಣಗಿದ ಸಿಮೆಂಟ್, ಸ್ಲೇಟ್ ಕಲರ್ ಹೀಗೇ ಸುಮಾರಷ್ಟು ಬಣ್ಣಗಳು .
ಕತ್ರೀನಾಳ
ಕೆನ್ನೆ ಗುಲಾಬಿ ಬಣ್ಣದ್ದು
ಅಂತ ಸುಮ್ಮನಾದರೆ ಅದು ಅವಳ ಕೆನ್ನೆಗೇ ಮಾಡಿದ ಮೋಸವಾಗತ್ತೆ . ಅದೇ ಆಕೆಯ ಕೆನ್ನೆ ಜಾಂಬೂ ಹಣ್ಣಿನ ಕಲರ್ ಅಂದ್ರೆ ಆಹಾ!! ಎಷ್ಟು ರಸವತ್ತಾದ ಕಲ್ಪನೆ !!
ಸ್ವಲ್ಪ ತಮಾಷೆ ಎನಿಸಿದರೂ ಹೌದಲ್ವೇ ಎಂದೆನಿಸೋ
ವಿಷಯವೊಂದಿದೆ. ನನ್ನ ಫ್ರೆಂಡ್ ಒಬ್ಬರ ಮನೆಯಲ್ಲಿ ಬೇಜ್ ಕಲರ್ ಗೆ 'ನಾಯಿ' ಕಲರ್ ಅಂತಾರಂತೆ!! "ಅದು
ಹೇಗೆ ಸಾಧ್ಯ, ನಾಯಿಗಳು ಕಪ್ಪು, ಬಿಳಿ ಬಣ್ಣದ್ದೂ ಇರ್ತಾವಲ್ಲಾ??” ಅಂತ ಕೇಳಿದ್ರೆ ಮೆಜಾರಿಟಿ ನಾಯಿಗಳು ನಾಯಿ ಕಲರ್ರೇ ಇರ್ತಾವೆ ಅನ್ನೋದು ಅವರ ಅಂಬೋಣ.
ಈ
“ಕಲರ್ ಕಲರ್
ವಾಟ್ ಕಲರ್ “ ಸಹವಾಸ ಇಷ್ಟಕ್ಕೇ
ಮುಗಿಯೋದಿಲ್ಲ, ನನ್ನ ಹತ್ತಿರ ಒಂದು ಸೀರೆಯಿತ್ತು, ಯಾವ ಬಣ್ಣದ್ದು ಅಂತ ಕೇಳಿದ್ರೆ ಹೇಗೆ ಹೇಳೋದು ? ನೇರಳೆ
ಬಣ್ಣದ ಆಚೀಚೆಯ 3-4 ಬಣ್ಣಗಳನ್ನು ಒಳಗೊಂಡ ಸೀರೆಯದು. ಪಿಂಕಿಶ್ ಪರ್ಪ್ಲಿಶ್ ಬ್ಲೂ ಅನ್ನಬಹುದು, ಆದ್ರೆ ಬರೀ
ಅಷ್ಟಂದ್ರೆ ಸಮಾಧಾನವಿಲ್ಲ. ಮಳೆಯಲ್ಲಿ ನೀರು ನಿಂತಾಗ ಅದರಲ್ಲಿ ವೆಹಿಕಲ್ ಗಳ ಪೆಟ್ರೋಲ್ ಸೋರತ್ತಲ್ಲಾ,
ಅದರ ಮೇಲೊಂದಿಷ್ಟು ಗಸಗಸೆ ಉದುರಿಸಿದ್ರೆ ಹೇಗೆ ಕಾಣತ್ತೋ ಹಾಗಿತ್ತು ಆ ಸೀರೆ. ಅಂದರೆ
ಆ ಸೀರೆ ಬಣ್ಣ ತಿಳ್ಕೊಳ್ಳೋ ಇಷ್ಟ
ಇರೋವ್ರು, ಇಷ್ಟು ಕಸರತ್ತು
ಮಾಡಿ ನೋಡ್ಬೇಕು !!
ಮ್ಯಾಚಿಂಗ್ ಸೆಂಟರ್ಗೆ ಹೊಕ್ಕ ಮಹಿಳೆಯೊಬ್ಬಳು ಕೇಳ್ತಾಳೆ, “ಸಾರ್, ಸೀರೆ ತರಲಿಕ್ಕೆ ಮರೆತು ಹೋಯ್ತು, ಕ್ರೀಮ್ ಗಿಂತ ಡಾರ್ಕ್, ಆದರೆ ಹಳದಿಗಿಂತ ಲೈಟ್ ಶೇಡಲ್ಲಿ ಒಂದು ಸ್ಯಾರೀ ಫಾಲ್ ಕೊಡಿ “ ಆತ ತೋರಿಸಿದ 3-4 ಶೇಡ್ ಗಳು ಇಷ್ಟವಾಗೊಲ್ಲ, ಆಗ “ ಒಂದು ಲೋಟ ಹಾಲಿಗೆ ಒಂದ್ ಎರಡು ಚುಟುಕಿ ಅರಿಶಿನ ಬೆರೆಸಿದರೆ ಯಾವ್ ಬಣ್ಣ ಬರತ್ತೋ ಆ ಕಲರ್!!” ಅಂತಾಳೆ. ಆಕೆಗೆ ಬೇಕಾಗಿರೋ ಫಾಲ್ ಕೊಡಲು ಆ ಅಂಗಡಿಯವನು ಇಷ್ಟು ಕೆಲಸ ಮಾಡಿ ನೋಡಬೇಕು.
ಒಟ್ಟಾರೆ ಬಣ್ಣಗಳಿಗೂ ಕಲರ್ಫುಲ್ ಹೆಸರುಗಳು , ಬಣ್ಣಗಳ ಹಬ್ಬ ಹತ್ತಿರ ಬರುತ್ತಿರುವಾಗ ಬಣ್ಣಗಳ ಬಗ್ಗೆ ಒಂದಿಷ್ಟು ಸಾಲುಗಳು :-)
(ಮಾರ್ಚ್ 2012 ರಲ್ಲಿ ಬರೆದದ್ದು)